ಕಲಬುರಗಿ: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಶೆಡ್ಗಳ ತೆರವು ವಿಚಾರ ಇದೀಗ ರಾಜಕೀಯ ಆಯಾಮ ಪಡೆದುಕೊಂಡಿದ್ದು, ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಬಿಜೆಪಿ ತೀವ್ರವಾಗಿ ಪ್ರಶ್ನಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್, “ಕೇರಳದವರಿಗೆ 180ರಿಂದ 200 ಮನೆಗಳನ್ನು ಕಟ್ಟಿಕೊಡಲು ಕಾಂಗ್ರೆಸ್ ಸರ್ಕಾರ ಸಿದ್ಧವಿದೆಯೇ? ಹಾಗಾದರೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಭಾಗಗಳ ನಿರಾಶ್ರಿತರಿಗೆ ಯಾರು ಮನೆ ಕಟ್ಟಿಕೊಡುತ್ತಾರೆ?” ಎಂದು ಪ್ರಶ್ನಿಸಿದರು.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ.ಸಿ. ವೇಣುಗೋಪಾಲ್ ಅವರ ಒಂದೇ ಟ್ವೀಟ್ಗೆ ಸರ್ಕಾರ ಅಕ್ರಮ ಮನೆಗಳನ್ನು ಸಕ್ರಮಗೊಳಿಸಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ನ್ಯಾಯಸಮ್ಮತ ಎಂಬುದನ್ನು ಪ್ರಶ್ನಿಸಿದರು.
ರಾಜ್ಯದಲ್ಲಿ ಸಾವಿರಾರು ಸ್ಥಳೀಯ ನಿರಾಶ್ರಿತರು ಮೂಲಭೂತ ಸೌಲಭ್ಯಗಳಿಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ, ಹೊರರಾಜ್ಯದವರ ವಿಚಾರದಲ್ಲಿ ಸರ್ಕಾರ ತೋರಿಸುತ್ತಿರುವ ಆಸಕ್ತಿ ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಕೋಗಿಲು ಬಡಾವಣೆಯ ಅಕ್ರಮ ಶೆಡ್ ತೆರವು ವಿಷಯದಲ್ಲಿ ಸರ್ಕಾರದ ನಿಲುವು ಗೊಂದಲಕಾರಿಯಾಗಿದೆ ಎಂದು ಆರೋಪಿಸಿದ ರವಿಕುಮಾರ್, “ಕಾನೂನು ಎಲ್ಲರಿಗೂ ಒಂದೇ ಆಗಬೇಕು. ಆಯ್ದವರಿಗಾಗಿ ಮಾತ್ರ ನಿಯಮಗಳನ್ನು ಸಡಿಲಿಸುವುದು ಸರಿಯಲ್ಲ” ಎಂದು ಹೇಳಿದರು.

























































