ಮಂಗಳೂರು: ಸರ್ಕಾರದ ಉದ್ದೇಶಿತ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025’ ಇದೀಗ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾಗಿದೆ. ಈ ವಿದೇಯಕ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷ ಇದನ್ನು ಜನವಿರೋಧಿ ಎಂದು ಬಣ್ಣಿಸಿದೆ. ಆದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಇದು ಜನಸ್ನೇಹಿ ನಡೆ ಎಂದು ಸಮರ್ಥಿಸಿಕೊಂಡಿದೆ.
ಇದೇ ವೇಳೆ, ‘ದ್ವೇಷ ಭಾಷಣ ನಿಗ್ರಹ’ ಸಂಬಂಧ ಕರ್ನಾಟಕಕ್ಕೆ ಸೂಕ್ತ ಕಾನೂನಿನ ಅಗತ್ಯವಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಅನೇಕ ತಿಂಗಳ ಹಿಂದೆಯೇ ಪ್ರತಿಪಾದಿಸಿದ್ದರು. ಕರಾವಳಿ ಜಿಲ್ಲೆಗಳಲ್ಲಿ ನಡೆದಿರುವ ಕೊಲೆ ಘಟನೆಗಳಿಗೆ ಹಾಗೂ ಹಿಂಸಾಚಾರಗಳಿಗೆ ದ್ವೇಷ ಹಾಗೂ ಪ್ರಚೋದನೆಗಳು ಕಾರಣವಾಗಿದ್ದು, ಇದಕ್ಕೆ ಸೂಕ್ತ ಕಾನೂನಿನ ಮೂಲಕ ಅಂಕುಶ ಹಾಕಬೇಕೆಂದು ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವರ ಆಗ್ರಹ ಇದೀಗ ವಿದೇಯಕದ ರೂಪ ಪಡೆದಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಪದ್ಮರಾಜ್ ಆರ್. ಪೂಜಾರಿ, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025 ಮಂಡನೆ ಮಾಡಿರುವ ರಾಜ್ಯ ಸರ್ಕಾರವನ್ನು ಅಭಿನಂಧಿಸಿದ್ದಾರೆ. ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಧಾರ್ಮಿಕ ಮತ್ತು ರಾಜಕೀಯ ವಿಚಾರಗಳಲ್ಲಿ ಸಂಘರ್ಷ ಸೃಷ್ಟಿಸುವ ಮಾತುಗಳು ಹೆಚ್ಚಾಗುತ್ತಿವೆ. ಭಾಷಣ ಮೂಲಕ ಯುವಕರನ್ನು ಪ್ರಚೋದಿಸುವ ಸನ್ನಿವೇಶಗಳು ಮರುಕಳಿಸುತ್ತಿವೆ. ಹಾಗಾಗಿ ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡುವುದು ಮತ್ತು ದ್ವೇಷ ಭಾಷಣದಿಂದ ಉಂಟಾಗುವ ಸಂಘರ್ಷಗಳನ್ನು ತಡೆಗಟ್ಟಲು ಈ ವಿಧೇಯಕ ತುಂಬಾ ಪರಿಣಾಮಕಾರಿಯಾಗಲಿದೆ ಎಂದು ಪ್ರತಿಪಾದಿಸಿದರು.
ವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ದ್ವೇಷವನ್ನುಂಟು ಮಾಡುವ ದ್ವೇಷ ಭಾಷಣದ ಪ್ರಸಾರ ಅಥವಾ ಪ್ರಚಾರ ಹಾಗೂ ಅಪರಾಧಗಳನ್ನು ತಡೆಗಟ್ಟಲು, ಅಂಥ ಅಪರಾಧಗಳಿಗೆ ದಂಡನೆಯನ್ನು ಉಪಬಂಧಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಈ ವಿಧೇಯಕ ಅನುಕೂಲವಾಗಲಿದೆ ಎಂದವರು ಬಣ್ಣಿಸಿದ್ದಾರೆ.
ವಕೀಲರೂ ಆಗಿರುವ ಪದ್ಮರಾಜ್, ಕರ್ನಾಟಕಕ್ಕೆ ಈ ವಿದೇಯಕ ಯಾವ ರೀತಿ ಪರಿಣಾಮಕಾರಿ ಎಂಬ ಬಗ್ಗೆ ತಮ್ಮದೇ ದಾಟಿಯಲ್ಲಿ ವಿವರಿಸಿದರು. ಕರಾವಳಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಧಾರ್ಮಿಕ ವಿಷಯ, ರಾಜಕೀಯ ಕಾರಣಗಳಿಂದಾಗಿ ದ್ವೇಷ ಭಾಷಣದಿಂದ ಅನೇಕ ಬಡ ಕುಟುಂಬದ ಯುವಕರು ಬಲಿಯಾಗುತ್ತಿದ್ದರು. ಇಂತಹ ಸಂದರ್ಭ ಈ ರೀತಿಯ ಮಸೂದೆಯ ಅನಿವಾರ್ಯತೆ ಬಗ್ಗೆ ಹಿಂದಿನಿಂದಲೂ ಆಗ್ರಹಿಸುತ್ತಾ ಬಂದಿದ್ದೆ. ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಹಾಸ್ ಶೆಟ್ಟಿ ಹಾಗು ಅಬ್ದುಲ್ ರಹಿಮಾನ್ ಹತ್ಯೆಯಾದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ನೇಮಕವಾದ ಸತ್ಯಶೋಧನಾ ಸಮಿತಿ ಕೂಡಾ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಸಂದರ್ಭ ದ್ವೇಷ ಭಾಷಣ ವಿರುದ್ಧ ಕಠಿಣ ಕಾನೂನು ಅಗತ್ಯತೆ ಬಗ್ಗೆ ಗಮನಸೆಳೆಯಿತು. ಇದೀಗ ಮಸೂದೆಗೆ ರಾಜ್ಯ ಸರ್ಕಾರದಿಂದ ಅಂಗೀಕಾರ ದೊರೆತ್ತಿರುವುದು ಶ್ಲಾಘನೀಯ ಎಂದವರು ಹೇಳಿದರು.
ಮುಂದಿನ ದಿನಗಳಲ್ಲಿ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಲು ಇದು ಮತ್ತಷ್ಟು ಅನುಕೂಲವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಡಿಸಿದರು.


















































