ಬೆಂಗಳೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನಿಸಲಾಗಿದೆ.
ಈ ಕುರಿತಂತೆ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ KSIIDC ಮತ್ತೊಂದು ಭರವಸೆಯ ಹೆಜ್ಜೆಯನ್ನು ಇರಿಸಿದೆ. ನಗರದ ಹೊರವಲಯದಲ್ಲಿ ಆಯ್ಕೆ ಮಾಡಲಾದ 3 ಸ್ಥಳಗಳ ವಿವರವಾದ ಕಾರ್ಯತಂತ್ರ ಮತ್ತು ಕಾರ್ಯಸಾಧ್ಯತಾ ವರದಿ ಸಿದ್ದಪಡಿಸಲು ಟೆಂಡರ್ ಕರೆಯುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಕ್ರಮವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ನಡೆಸಿದ ಪ್ರಾಥಮಿಕ ಪರಿಶೀಲನೆಯ ನಂತರ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಅವರು, ಪ್ರಸ್ತಾವಿತ ಗ್ರೀನ್‌ಫೀಲ್ಡ್ (ಹೊಸ) ವಿಮಾನ ನಿಲ್ದಾಣವು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ವಾಯು ಸಂಚಾರ ಬೇಡಿಕೆಯನ್ನು ಪೂರೈಸಲು ಮತ್ತು ಕರ್ನಾಟಕದ ದೀರ್ಘಕಾಲೀನ ವಾಯುಯಾನ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಭದ್ರಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.






















































