ವರದಿ: ರವಿಕುಮಾರ್
ದಾವಣಗೆರೆ: ಅಧಿಕಾರಿಗಳು ಹಗಲು ಹೊತ್ತಲ್ಲಿ, ಕೆಲಸದ ವೇಳೆ ಇಲಾಖಾ ಕಚೇರಿಗಳಿಗೆ ಭೇಟಿ ನೀಡುವುದು ಸಾಮಾನ್ಯ. ಆದರೆ, ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್, ಅವರು ರಾತ್ರಿ ವೇಳೆ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿ ಅಧಿಕಾರಿಗಳ ಪಾಳಯದಲ್ಲಿ ಸಂಚಲನ ಮೂಡಿಸಿದ್ದಾರೆ. ಅವರು ಜಗಳೂರು ತಾಲೂಕಿನ ಮಾರಿಕುಂಟೆ ಚದರಗೊಳ್ಳ,ಮುಗ್ಗಿದರಾಗಿ ಹಳ್ಳಿ ಗ್ರಾಮಗಳಿಗೆ ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿ.ಪಂ. ಸಿಇಓ ನಡೆ ಗ್ರಾಮಗಳ ಅಭಿವೃದ್ಧಿ ಕಡೆ:
ಮೂರನೇ ಭಾರಿಗೆ ಜಗಳೂರು ತಾಲೂಕಿಗೆ ಭೇಟಿ ನೀಡಿದ ಸಿಇಓ ಗಿತ್ತೆ ಮಾಧವ ವಿಠಲ ರಾವ್ ಅವರು, ಚದುರಗೊಳ್ಳ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸಮಸ್ಯೆಗಳ ಸರಮಾಲೆಯನ್ನು ವಿದ್ಯಾರ್ಥಿಗಳು ಎಳೆ ಎಳೆಯಾಗಿ ಬಿಚ್ಚಿಟ್ಟರು.
ವಿದ್ಯಾರ್ಥಿ ನಿಲಯದಲ್ಲಿ 14 ವಿದ್ಯಾರ್ಥಿಗಳಿದ್ದು 45 ವಿದ್ಯಾರ್ಥಿಗಳಿಗೆ ಬಿಲ್ ಮಾಡಿಕೊಳ್ತಿದ್ದಾರೆ. ನಿಲಯ ಮೇಲ್ವಿಚಾರಕರು ಕೇಂದ್ರದಲ್ಲಿ ಇರುವುದಿಲ್ಲ ರಾತ್ರಿ ವೇಳೆ ಮದ್ಯ ವ್ಯಸನಿಗಳು ಮತ್ತು ಗಾಂಜಾ ವ್ಯಸಸಿನಿಗಳು ವಿದ್ಯಾರ್ಥಿ ನಿಲಯದ ಆವರಣದಲ್ಲಿ ಕುಳಿತು ಗಾಂಜಾ ಮತ್ತು ಮಧ್ಯಪಾನ ಮಾಡುತ್ತಿರುತ್ತಾರೆ. ಇದರಿಂದ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡರು. ಸಮಸ್ಯೆ ಆಲಿಸಿದ ಸಿಇಓ ಮುಂದೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಂತರ ಮರಿಕುಂಟೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಹಾಗೆ ಹಳ್ಳಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಊಟ ಮಾಡಿ ಗಮನಸೆಳೆದರು. ವಿದ್ಯಾರ್ಥಿಗಳಿಗೆ ನೀಡುವಂತಹ ಪರಿಕರಗಳನ್ನು ಪರಿಶೀಲನೆ ನಡೆಸಿದರು. ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಬಿಟ್ಟು ನಿಮ್ಮನ್ನೇ ಪೋಷಕರಿಂದ ನಂಬಿಕೊಂಡು ಇಲ್ಲೇ ಜೀವನ ಮಾಡುತ್ತಿದ್ದಾರೆ. ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯಿತಿ ಇ.ಓ. ಕೆಂಚಪ್ಪ, ತಾಲೂಕು ಆರೋಗ್ಯ ಅಧಿಕಾರಿ ವಿಶ್ವನಾಥ್, ಅಧಿಕಾರಿಗಳಾದ ನವೀನ್ ಕುಮಾರ್, ಸಿದ್ದಿಕ್, ರಾಘವೇಂದ್ರ ಮೊದಲಾದವರು ಸಿಇಓಅವರಿಗೆ ಸಾಥ್ ನೀಡಿದ್ದರು.



















































