ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ವಿಲೀನ ಅಥವಾ ಹೂಡಿಕೆ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಪ್ರಸ್ತಾವನೆಯನ್ನು ಪರಿಗಣಿಸುತ್ತಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.
2026ರೊಳಗೆ ನಾಲ್ಕು ಪಿಎಸ್‌ಬಿಗಳನ್ನು ಹೂಡಿಕೆ ಹಿಂತೆಗೆತ ಅಥವಾ ದೊಡ್ಡ ಬ್ಯಾಂಕುಗಳೊಂದಿಗಿನ ವಿಲೀನಕ್ಕೆ ಸರ್ಕಾರ ಯೋಜನೆ ಹಾಕಿಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರಸ್ತುತ ಪಿಎಸ್‌ಬಿಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತಕ್ಕೆ ಯಾವುದೇ ಪ್ರಸ್ತಾವನೆಯೂ ಸರ್ಕಾರದ ಮುಂದೆ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಸರ್ಕಾರ ಪಿಎಸ್‌ಬಿ ಏಕೀಕರಣದ ಹೊಸ ನೀಲನಕ್ಷೆ ಸಿದ್ಧಪಡಿಸುತ್ತಿದೆ, ಸಾಲದಾತರ ಸಂಖ್ಯೆಯನ್ನು 12ರಿಂದ ನಾಲ್ಕಕ್ಕೆ ಇಳಿಸಲು ಯೋಚಿಸಿದೆ ಎಂಬ ವರದಿಗಳು ಹೊರಬಿದ್ದಿದ್ದವು. ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್‌ಗಳನ್ನು ಬಲಪಡಿಸಲು, ಕಾರ್ಯಾಚರಣಾ ದಕ್ಷತೆಯನ್ನು ಹೆಚ್ಚಿಸಲು ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಬ್ಯಾಂಕಿಂಗ್ ಸಂಸ್ಥೆಗಳನ್ನು ರೂಪಿಸಲು ಈ ಯೋಚನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಚೌಧರಿ, ವರದಿಗಳ ನಡುವೆಯೂ ಕೇಂದ್ರಕ್ಕೆ ಅಂತಹ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಪುನರುಚ್ಚರಿಸಿದರು.
ಸಾರ್ವಜನಿಕ ವಲಯದ ಬ್ಯಾಂಕುಗಳ ಒಟ್ಟು ಅನುತ್ಪಾದಕ ಆಸ್ತಿಗಳ (ಎನ್‌ಪಿಎ) ಪ್ರಮಾಣ 2016 ಮಾರ್ಚ್‌ನಲ್ಲಿ ಶೇ 9.27 ರಿಂದ 2025 ಮಾರ್ಚ್ ವೇಳೆಗೆ ಶೇ 2.58 ಕ್ಕೆ, 2025 ಜೂನ್ ವೇಳೆಗೆ ಶೇ 2.51 ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದರು. ಸ್ಲಿಪೇಜ್ ಅನುಪಾತವೂ 2016ರ ಶೇ 7.5 ರಿಂದ 2025 ಮಾರ್ಚ್‌ನಲ್ಲಿ ಶೇ 1.0 ಕ್ಕೆ, ಜೂನ್ 2025ರಲ್ಲಿ ಶೇ 0.9 ಕ್ಕೆ ಇಳಿಕೆಯಾಗಿದೆ. ರೈಟ್-ಆಫ್ ಮಾಡಲಾದ ಸಾಲಗಳ ವಸೂಲಾತಿ ನಿರಂತರ ಪ್ರಕ್ರಿಯೆಯಾಗಿದ್ದು, ಬ್ಯಾಂಕುಗಳು ಲಭ್ಯವಿರುವ ವಿವಿಧ ಕಾನೂನು ಕ್ರಮಗಳ ಮೂಲಕ ಸಾಲಗಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿವೆ ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ, ಸಾಲದಾತರ ಬಗೆಗಿನ RBIಯ ಸೂಚನೆಯನ್ನು ಉಲ್ಲೇಖಿಸಿದ ಅವರು, ಬ್ಯಾಂಕುಗಳು ಪ್ರತೀ ತಿಂಗಳು ಎಲ್ಲಾ ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ (ಸಿಐಸಿ) ಡೇಟಾವನ್ನು ಒದಗಿಸಬೇಕು ಮತ್ತು ಆ ಮಾಹಿತಿ ಸಿಐಸಿಗಳ ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಬೇಕು ಎಂದು ಹೇಳಿದರು.
25 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಉದ್ದೇಶಪೂರ್ವಕ ಸುಸ್ತಿದಾರರ ವಿವರಗಳು ಕೂಡ ಸಿಐಸಿಗಳ ಪೋರ್ಟಲ್‌ನಲ್ಲಿ ಲಭ್ಯವಿದ್ದು, ಆರ್‌ಬಿಐ ನಿಯಂತ್ರಣದಲ್ಲಿರುವ ಸಿಐಸಿಗಳ ಅಧಿಕೃತ ವೆಬ್‌ಪೋರ್ಟಲ್‌ಗಳ ಮೂಲಕ ಸಾರ್ವಜನಿಕರು ನೋಡಬಹುದಾಗಿದೆ ಎಂದು ಸಚಿವರು ತಿಳಿಸಿದರು.






















































