ನವದೆಹಲಿ: ಹಣದುಬ್ಬರ ಗುರಿಗಿಂತ ಕೆಳಮಟ್ಟದಲ್ಲೇ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ 5ರಂದು ನಡೆಯಲಿರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನೀತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿ 5.25% ಕ್ಕೆ ತರುವ ಸಾಧ್ಯತೆ ಇದೆ ಎಂದು ಎಚ್‌ಎಸ್‌ಬಿಸಿ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ರಿಸರ್ಚ್ ತನ್ನ ನವೀಕೃತ ವಿಶ್ಲೇಷಣೆಯಲ್ಲಿ ತಿಳಿಸಿದೆ.
ಇಲ್ಲಿಯವರೆಗೆ ದೇಶದ ಆರ್ಥಿಕ ಚಟುವಟಿಕೆ ಸದೃಢವಾಗಿದ್ದು, ಸರ್ಕಾರಿ ವೆಚ್ಚದ ಮುಂಚೂಣಿ ಲೋಡಿಂಗ್ ಮತ್ತು ಜಿಎಸ್‌ಟಿ ಕಡಿತದ ನಂತರ ಚಿಲ್ಲರೆ ಖರ್ಚು ಹೆಚ್ಚಿರುವುದು ಬೆಳವಣಿಗೆಗೆ ಪೂರಕವಾಗಿದೆ. ಆದರೆ, ನವೆಂಬರ್ ತಿಂಗಳ ಫ್ಲ್ಯಾಶ್ ಉತ್ಪಾದನಾ ಪಿಎಂಐ 56.6 ಕ್ಕೆ ಇಳಿದಿರುವುದು, ಹೊಸ ಆದೇಶಗಳು ನಿಧಾನಗೊಂಡಿರುವ ಸೂಚನೆಯಾಗಿದೆ. ಜಿಎಸ್‌ಟಿ ಉತ್ತೇಜನದ ಪರಿಣಾಮಗಳು ಈಗ ಗರಿಷ್ಠ ಮಟ್ಟಕ್ಕೆ ತಲುಪಿದ್ದೇನೋ ಎಂಬ ಶಂಕೆಯನ್ನು ವರದಿ ವ್ಯಕ್ತಪಡಿಸಿದೆ.
“ಪ್ರಸ್ತುತ ಬೆಳವಣಿಗೆ ಬಲವಾದರೂ, 2026ರ ಮಾರ್ಚ್ ತ್ರೈಮಾಸಿಕಕ್ಕೆ ಹಣಕಾಸು ಪ್ರಚೋದನೆ ಕಡಿಮೆಯಾಗುವುದು ಹಾಗೂ ರಫ್ತು ನಿಧಾನಗೊಳ್ಳುವುದು ಬೆಳವಣಿಗೆಯನ್ನು ಮೃದುವಾಗಿಸಬಹುದು. ಈ ಹಿನ್ನೆಲೆ, ಆರ್‌ಬಿಐ ಡಿಸೆಂಬರ್ ನೀತಿ ಸಭೆಯಲ್ಲಿ ಸಡಿಲಿಕೆ ಕ್ರಮ ತೆಗೆದುಕೊಳ್ಳಬಹುದು,” ಎಂದು ಎಚ್‌ಎಸ್‌ಬಿಸಿ ಅಭಿಪ್ರಾಯಿಸಿದೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ 8.2% ದಾಖಲಾಗಿದ್ದು, ಹಿಂದಿನ ತ್ರೈಮಾಸಿಕದ 7.8% ಕ್ಕಿಂತ ಹೆಚ್ಚಾಗಿದೆ. ಇದು ಒಮ್ಮತದ ನಿರೀಕ್ಷೆಯ 7.5% ಕ್ಕಿಂತಲೂ ಅಧಿಕ. ಜಿವಿಎ ಬೆಳವಣಿಗೆ 8.1% ಆಗಿದ್ದು, ನಾಮಮಾತ್ರ ಜಿಡಿಪಿ 8.7% ಏರಿಕೆಯನ್ನು ತೋರಿಸಿದೆ.
ಜಿಎಸ್ಟಿ ದರಕಡಿತದ ಘೋಷಣೆ ಆಗಸ್ಟ್ 15ರಂದು ನಡೆದಿದ್ದರೂ ಜಾರಿಗೆ ಸೆಪ್ಟೆಂಬರ್ 22ರಿಂದ ಆರಂಭವಾದ ಕಾರಣ, ಗ್ರಾಹಕ ಬೇಡಿಕೆಯ ನಿರೀಕ್ಷೆಯಲ್ಲಿ ಉತ್ಪಾದನೆ ಹೆಚ್ಚಾಗಿರುವುದೇ ಜಿಡಿಪಿ ವೇಗಕ್ಕೆ ಕಾರಣವೆಂದು ವರದಿ ವಿಶ್ಲೇಷಿಸುತ್ತದೆ. ಇದಲ್ಲದೆ, ಕಡಿಮೆ ಆದಾಯದ ರಾಜ್ಯಗಳು ವೇಗವಾಗಿ ಬೆಳೆಯುತ್ತಿರುವುದು ರಾಷ್ಟ್ರೀಯ ಜಿಡಿಪಿ ಆವೇಗ ಬಲವಾಗಿರುವ ಮತ್ತೊಂದು ಕಾರಣ ಎಂದು ಎಚ್‌ಎಸ್‌ಬಿಸಿ ತಿಳಿಸಿದೆ.
ಅಮೆರಿಕವು ಆಗಸ್ಟ್‌ನಿಂದ ಭಾರತೀಯ ರಫ್ತಿಗೆ 50% ಪರಸ್ಪರ ಸುಂಕ ವಿಧಿಸಿದರೂ ಭಾರತದ ಬೆಳವಣಿಗೆ ಮೇಲೆ ಹೆಚ್ಚಿನ ಪರಿಣಾಮ ಆಗಿಲ್ಲವೆಂದು ವರದಿ ಉಲ್ಲೇಖಿಸಿದೆ.





















































