ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರೀಕರಣ ಡಿಸೆಂಬರ್‌ನಲ್ಲಿ ಮಹತ್ತರ ಹಂತ ಪ್ರವೇಶಿಸಲಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಚಿತ್ರ ತಂಡಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ಉದ್ಯಮ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಮೂಲಗಳ ಪ್ರಕಾರ, ಡಿಸೆಂಬರ್ 2ರ ಸುಮ್ಮಾರಿಗೆ ಮೋಹನ್ ಲಾಲ್ ಕೆಲ ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅವರು ಮಲಯಾಳಂ ಚಿತ್ರಗಳ ಚಿತ್ರೀಕರಣಕ್ಕಾಗಿ ಮರಳಿದ್ದು, ಡಿಸೆಂಬರ್ 21 ರಿಂದ 24ರ ನಡುವೆ ಮತ್ತೆ ‘ಜೈಲರ್ 2’ ತಂಡಕ್ಕೆ ಸೇರುವ ಸಾಧ್ಯತೆ ಇದೆ. ದಿನಾಂಕ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಂದಿಲ್ಲ.
ಈ ನಡುವೆ, ಗೋವಾದಲ್ಲಿ ವಿಜಯ್ ಸೇತುಪತಿ ಅವರ ಭಾಗಗಳ ಚಿತ್ರೀಕರಣ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಅವರ ತಾರಾಗಣ ಸೇರ್ಪಡೆ ಬಗ್ಗೆ ಅಧಿಕೃತ ದೃಢೀಕರಣವಿಲ್ಲ.
ಇದೇ ವೇಳೆ, ಈ ವರ್ಷದ ಆರಂಭದಲ್ಲಿ ರಜನಿಕಾಂತ್ ಸ್ವತಃ ‘ಜೈಲರ್ 2’ ಕೆಲಸ ಡಿಸೆಂಬರ್ ವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಬಹುದು. “ಚಿತ್ರೀಕರಣ ಚೆನ್ನಾಗಿ ಸಾಗುತ್ತಿದೆ. ಮುಗಿಯುವ ಹೊತ್ತಿಗೆ ಡಿಸೆಂಬರ್ ಆಗಬಹುದು,” ಎಂದು ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ಮೊದಲ ಭಾಗವೇ 650 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮೂಲಕ ಭರ್ಜರಿ ಯಶಸ್ಸು ಕಂಡಿದ್ದರಿಂದ, ಎರಡನೇ ಭಾಗದ ಮೇಲೆ ಪ್ರಾರಂಭದಿಂದಲೇ ಅಪಾರ ಕುತೂಹಲ ಉಂಟಾಗಿದೆ. ಸನ್ ಪಿಕ್ಚರ್ಸ್ ಈ ವರ್ಷದ ಮಾರ್ಚ್ 10ರಂದು ಚಿತ್ರೀಕರಣ ಪ್ರಾರಂಭವಾಗಿದ್ದರೆಂದು ಘೋಷಿಸಿತ್ತು. ಟೀಸರ್ ಬಿಡುಗಡೆಯಾದ ನಂತರ ಚಿತ್ರದ ಮೇಲಿನ ಚರ್ಚೆ ಇನ್ನಷ್ಟು ಗರಿಗೆದರಿತು.
ಈ ಮಧ್ಯೆ, ನಟಿ ರಮ್ಯಾ ಕೃಷ್ಣನ್ ಅಟ್ಟಪಾಡಿಯಲ್ಲಿ ನಡೆದ ಶೂಟಿಂಗ್ ದಿನದ ಅನುಭವ ಹಂಚಿಕೊಂಡು, “ಪಡೆಯಪ್ಪನ 26 ವರ್ಷಗಳು ಮತ್ತು ಜೈಲರ್ 2 ರ ಮೊದಲ ದಿನದ ಚಿತ್ರೀಕರಣ” ಎಂದು ಬರೆದು ಅಭಿಮಾನಿಗಳನ್ನು ರಂಜಿಸಿದ್ದರು. ಅವರು ಮೊದಲ ಭಾಗದಂತೆಯೇ ವಿಜಯ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ರಜನಿಕಾಂತ್ ಅವರ ಸೊಸೆ ಶ್ವೇತಾ ಪಾಂಡಿಯನ್ ಪಾತ್ರದಲ್ಲಿ ನಟಿ ಮಿರ್ನಾ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊದಲ ಭಾಗಕ್ಕೆ ಸಂಗೀತ ಸಂಯೋಜಿಸಿದ ಅನಿರುದ್ಧ್, ಮುಂದುವರಿಕೆಯಲ್ಲೂ ತಮ್ಮ ಧ್ವನಿಯನ್ನು ನೀಡುತ್ತಿದ್ದಾರೆ.





















































