ಕೊಲಂಬೊ: ದಿತ್ವಾ ಚಂಡಮಾರುತದ ನಂತರ ಸಂಪೂರ್ಣವಾಗಿ ಪ್ರತ್ಯೇಕವಾಗಿದ್ದ ಶ್ರೀಲಂಕಾದ ಕೋಟ್ಮಲೆ ಪ್ರದೇಶದಲ್ಲಿ ಭಾನುವಾರ ಭಾರತೀಯ ವಾಯುಪಡೆಯು ಮಹತ್ತರ ರಕ್ಷಣಾ ಕಾರ್ಯಾಚರಣೆ ನಡೆಸಿ 12 ಭಾರತೀಯರು ಸೇರಿದಂತೆ 45 ಮಂದಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ಕೋಟ್ಮಲೆ ಪ್ರದೇಶಕ್ಕೆ ಸಂಪರ್ಕ ರಸ್ತೆಗಳು ಅಡಚಣೆಯಾಗಿರುವ ಹಿನ್ನೆಲೆಯಲ್ಲಿ, ದಿನಪೂರ್ತಿ ಐಎಎಫ್ ಹೆಲಿಕಾಪ್ಟರ್‌ಗಳು ನಿರಂತರ ಹಾರಾಟ ನಡೆಸಿ, 6 ಗಂಭೀರ ಗಾಯಾಳುಗಳು ಮತ್ತು 4 ಶಿಶುಗಳು ಸೇರಿದಂತೆ ಸಿಲುಕಿಕೊಂಡವರನ್ನು ಕೊಲಂಬೊಗೆ ಕರೆದೊಯ್ದವು. ರಕ್ಷಿಸಲ್ಪಟ್ಟವರಲ್ಲಿ ಶ್ರೀಲಂಕಾ ನಾಗರಿಕರ ಜೊತೆಗೆ ಅನೇಕ ದೇಶಗಳ ವಿದೇಶಿ ಪ್ರಜೆಗಳೂ ಸೇರಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಳನ್ನು ಬಲಪಡಿಸಲು, ಐಎಎಫ್ 57 ಶ್ರೀಲಂಕಾ ಸೇನಾ ಸಿಬ್ಬಂದಿಯನ್ನು ಪೀಡಿತ ಪ್ರದೇಶಕ್ಕೆ ವಿಮಾನದಲ್ಲಿ ಸಾಗಿಸಿ ನೆಲದ ಪ್ರಮಾಣವನ್ನು ವಿಸ್ತರಿಸಿದೆ. ಜೊತೆಗೆ ಭೀಷ್ಮ್ ಕ್ಯಾಪ್ಸುಲ್ ಮತ್ತು ವೈದ್ಯಕೀಯ ತಂಡವನ್ನು ಒಳಗೊಂಡ ವಿಶೇಷ ವಿಮಾನಗಳ ಮೂಲಕ ರಾತ್ರಿ 8 ಗಂಟೆಯವರೆಗೆ 400 ಕ್ಕೂ ಹೆಚ್ಚು ಭಾರತೀಯರನ್ನು ಭಾರತಕ್ಕೆ ಹಿಂತಿರುಗಿಸಲಾಗಿದೆ.
ಐಎಎಫ್ ತಿಳಿಸಿದಂತೆ, ಕೋಟ್ಮಲೆಯಲ್ಲಿ ಪೂರ್ವಪರಿಚಿತ ಹೆಲಿಪ್ಯಾಡ್‌ಗೆ ಸಿಲುಕಿಕೊಂಡವರನ್ನು ತಲುಪಿಸಲು ಗರುಡ ಕಮಾಂಡೋವನ್ನು ಹಗ್ಗದ ಮೂಲಕ ಕೆಳಗೆ ಇಳಿಸಲಾಯಿತು. ನಂತರ 24 ಪ್ರಯಾಣಿಕರನ್ನು — ಭಾರತೀಯರು, ಶ್ರೀಲಂಕಾದವರು ಮತ್ತು ಇತರೆ ವಿದೇಶಿ ಪ್ರಜೆಗಳನ್ನು — ಕೊಲಂಬೊಗೆ ಸ್ಥಳಾಂತರಿಸಲಾಯಿತು.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಐಎಎಫ್ ಮಾಹಿತಿ ಹಂಚಿಕೊಂಡ ನಂತರ X ನಲ್ಲಿ “ಆಪರೇಷನ್ ಸಾಗರ್ ಬಂಧು” ಎಂದು ಪ್ರತಿಕ್ರಿಯಿಸಿದ್ದಾರೆ.
ನವೆಂಬರ್ 29ರಂದು ಐಎನ್‌ಎಸ್ ವಿಕ್ರಾಂತ್‌ನ ಚೇತಕ್ ಹೆಲಿಕಾಪ್ಟರ್ ಮೂಲಕ ಮೇಲ್ಛಾವಣಿಯಲ್ಲಿ ಸಿಲುಕಿದ್ದ ನಾಲ್ವರ ಕುಟುಂಬವನ್ನು ರಕ್ಷಿಸಿದ ಬಗ್ಗೆ ಶ್ರೀಲಂಕಾದ ಭಾರತೀಯ ಹೈ ಕಮಿಷನ್ ಮಾಹಿತಿ ಹಂಚಿಕೊಂಡಿತ್ತು.
ಇದೀಗ ದಿತ್ವಾ ಚಂಡಮಾರುತದಿಂದಾಗಿ ದ್ವೀಪ ರಾಷ್ಟ್ರವು ನಿರಂತರ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದ ತತ್ತರಿಸಿದೆ. ಸರಣಿ ದುರ್ಘಟನೆಗಳಲ್ಲಿ 153 ಮಂದಿ ಸಾವನ್ನಪ್ಪಿದ್ದಾರೆ, ಕನಿಷ್ಠ 191 ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿವೆ.





















































