ದಾವಣಗೆರೆ: ಧಾರ್ಮಿಕ ಸೇವೆಯಷ್ಟೇ ಸಾಮಾಜಿಕ ಕ್ಷೇತ್ರದಲ್ಲಿಯೂ ತನ್ನದೇ ಗುರುತು ಮೂಡಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿ. ವಿರೇಂದ್ರ ಹೆಗಡೆ ಅವರ ಸೇವೆ ಸಾವಿರಾರು ಕುಟುಂಬಗಳಿಗೆ ದಾರಿದೀಪವಾಗಿವೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪಿ.ಎಸ್. ಅರವಿಂದನ್ ಹೇಳಿದ್ದಾರೆ.
ಜಗಳೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ–ಸಂಸ್ಥೆಗಳ ವತಿಯಿಂದ ವಿರೇಂದ್ರ ಹೆಗಡೆ ಅವರ ಜನ್ಮದಿನಾಚರಣೆಯ ಅಂಗವಾಗಿ ರೋಗಿಗಳಿಗೆ ಹಣ್ಣು, ಬ್ರೆಡ್ ಮತ್ತು ಬಿಸ್ಕೆಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದನ್, “ವಿರೇಂದ್ರ ಹೆಗಡೆ ಅವರು ಪೂರ್ವಜರ ಮಂಜುನಾಥಸ್ವಾಮಿ ಆರಾಧನಾ ಪರಂಪರೆಯನ್ನು ಮುಂದುವರಿಸಿಕೊಂಡು, ಧಾರ್ಮಿಕ ಕ್ಷೇತ್ರಕ್ಕೆ ಕೊಡುಗೆ ನೀಡಿರುವುದರ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳ ಜಾಲವನ್ನು ವಿಸ್ತರಿಸಿದ್ದಾರೆ. ಸ್ವ–ಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸಿ ಆರ್ಥಿಕವಾಗಿ ಸಬಲಗೊಳಿಸಿದ್ದಾರೆ. ವಿದ್ಯಾರ್ಥಿವೇತನ, ನಿರ್ಗತಿಕರಿಗೆ ಸಹಾಯಧನ, ಶೌಚ–ಸೂರಿನ ಸೌಲಭ್ಯ, ಮದ್ಯವರ್ಜನ ಶಿಬಿರಗಳು ಸೇರಿದಂತೆ ನೂರಾರು ಸೇವಾ ಕಾರ್ಯಗಳಿಂದ ಅನೇಕ ಕುಟುಂಬಗಳಿಗೆ ಜೀವನಧಾರವಾಗಿದ್ದಾರೆ” ಎಂದು ಶ್ಲಾಘಿಸಿದರು.
ಕಿದ್ವಾಯಿ ಆಸ್ಪತ್ರೆಯ ನಿವೃತ್ತ ವೈದ್ಯ ಡಾ. ಇಬ್ರಾಹಿಂ ಮಾತನಾಡಿ, “ಬಡವರ ಆರೋಗ್ಯ ಸೇವೆಯಲ್ಲಿ ವಿರೇಂದ್ರ ಹೆಗಡೆ ಅವರು ಸಲ್ಲಿಸಿದ ಕೊಡುಗೆ ಅಪಾರ. ಕಿದ್ವಾಯಿ ಸಂಸ್ಥೆಗೆ ಹಾಸಿಗೆ ಮತ್ತು ಔಷಧೋಪಚಾರಕ್ಕೆ ನೀಡಿದ ಸಹಕಾರ ವಿಶೇಷ” ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾಸಂತಿ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ, ವೈದ್ಯರಾದ ಡಾ. ವಿಜಯ್ ಕುಮಾರ್, ವಲಯ ಮೇಲ್ವಿಚಾರಕ ಮಂಜುನಾಯ್ಕ, ಮುಖಂಡರಾದ ಪಿ. ರೇವಣ್ಣ, ಪಾದರ್ ಸಿಲ್ವಿ, ಮೆಹಬೂಬ್ ಅಲಿ, ಎ. ಹೊನ್ನೂರುಸ್ವಾಮಿ, ಶಾಹಿನಾ ಬೇಗಂ, ಓ. ಮಂಜಣ್ಣ, ಅಂಜುಜಾ ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






















































