ನವದೆಹಲಿ: ಬೆಂಬಲಬೆಲೆ ಯೋಜನೆಯಡಿ (PSS) ಹೆಸರು, ಉದ್ದು, ಸೋಯಾಬಿನ್, ಸೂರ್ಯಕಾಂತಿ ಹಾಗೂ ಶೇಂಗಾ ಖರೀದಿಗೆ ತಕ್ಷಣ ಅನುಮೋದನೆ ನೀಡುವಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ರಬಿ ಅಭಿಯಾನ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಈ ಬೆಳೆಗಳ ಮಾರುಕಟ್ಟೆ ಬೆಲೆ ಕನಿಷ್ಠ ಬೆಂಬಲಬೆಲೆಗೆ (MSP) ಕಡಿಮೆಯಾಗಿದೆ. ಇದರಿಂದ ರಾಜ್ಯದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದಲೇ ತುರ್ತು ಕ್ರಮವಾಗಿ ಈ ಬೆಳೆಗಳನ್ನು PSS ಅಡಿಯಲ್ಲಿ ಸಂಗ್ರಹಿಸಬೇಕು” ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದರು.
ಕಳೆದ ಕೆಲವು ವರ್ಷಗಳಿಂದ ಕರ್ನಾಟಕಕ್ಕೆ ನೀಡುತ್ತಿರುವ ಬೆಂಬಲಕ್ಕಾಗಿ ಕೇಂದ್ರ ಸಚಿವಾಲಯಕ್ಕೆ ಧನ್ಯವಾದ ಸಲ್ಲಿಸಿದ ಅವರು, SMAM, RKVY, ATMA, PMSKY, WDC ಮತ್ತು PDPS ಯೋಜನೆಗಳ ಮೂಲಕ ವಿಶೇಷವಾಗಿ ಮಾವು ಬೆಳೆಗಾರರಿಗೆ ನೆರವಾದಕ್ಕಾಗಿ ರಾಜ್ಯದ ರೈತರ ಪರವಾಗಿ ಕೃತಜ್ಞತೆ ವ್ಯಕ್ತಪಡಿಸಿದರು.
ಅನುದಾನ-ರಸಗೊಬ್ಬರ ಪೂರೈಕೆ:
ಕೃಷಿ ಯಾಂತ್ರೀಕರಣದ ಬೇಡಿಕೆ ಹೆಚ್ಚುತ್ತಿರುವುದರಿಂದ SMAM ಯೋಜನೆಗೆ ಹೆಚ್ಚುವರಿ ನೆರವು ಅಗತ್ಯವಿದೆ. 2025-26ನೇ ಸಾಲಿಗೆ ಕರ್ನಾಟಕಕ್ಕೆ 200 ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವಂತೆ ಸಚಿವರು ಮನವಿ ಮಾಡಿದರು.
ಏಪ್ರಿಲ್–ಸೆಪ್ಟೆಂಬರ್ ಅವಧಿಗೆ ಕರ್ನಾಟಕಕ್ಕೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಇನ್ನೂ ಬಾಕಿಯಿದ್ದು, ಶೀಘ್ರ ಪೂರೈಕೆ ಮಾಡಬೇಕೆಂದು ಅವರು ಕೇಂದ್ರಕ್ಕೆ ಒತ್ತಾಯಿಸಿದರು.




























































