ಬೆಂಗಳೂರು: ನೌಕರರ ಬೇಡಿಕೆಗಳನ್ನು ಪೂರೈಸದ ಹಿನ್ನೆಲೆಯಲ್ಲಿ ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಜ್ಜಾಗಿದ್ದ ರಾಜ್ಯ ಸಾರಿಗೆ ನೌಕರರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಶಾಕ್ ನೀಡಿದ್ದು, ಮುಷ್ಕರವನ್ನು ತಡೆಯಲು ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ESMA) ಜಾರಿಗೊಳಿಸಿದೆ.
38 ತಿಂಗಳ ವೇತನ ಪರಿಷ್ಕರಣೆಯ ಬಾಕಿ ಮೊತ್ತದ ಪಾವತಿ, ಸೇವಾ ಶರತ್ತುಗಳಲ್ಲಿ ಸುಧಾರಣೆ, ನಿವೃತ್ತಿ ವೇತನ ಸಮಸ್ಯೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದ ನೌಕರರ ಸಂಘಟನೆಗಳು, ಆಗಸ್ಟ್ 5ರಿಂದ ಮುಷ್ಕರಕ್ಕೆ ಕರೆ ನೀಡಿದ್ದವು.
ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ, 2013ರಡಿ ESMA ಜಾರಿಗೆ ಸರ್ಕಾರ ಮುಂದಾಗಿದೆ. ಈ ಕಾಯ್ದೆಯಡಿ, ಸಾರ್ವಜನಿಕ ಜೀವನಕ್ಕೆ ಅಗತ್ಯವಾಗಿರುವ ಸೇವೆಗಳ ಮೇಲೆ ಮುಷ್ಕರ ಅಥವಾ ಅಡಚಣೆ ಉಂಟುಮಾಡುವುದು ಅಪರಾಧ. ಸರಕಾರದ ನೋಟಿಫಿಕೇಶನ್ ಪ್ರಕಾರ, ಡಿಸೆಂಬರ್ 31, 2025ರವರೆಗೆ ಸಾರಿಗೆ ನಿಗಮಗಳಲ್ಲಿ ಯಾವುದೇ ರೀತಿಯ ಮುಷ್ಕರವನ್ನು ನಿಷೇಧಿಸಲಾಗಿದೆ.
ಎಸ್ಮಾ ಅಡಿ ನಿಗಮ ನೌಕರರಿಗೆ ಎಚ್ಚರಿಕೆ:
- ಮುಷ್ಕರದಲ್ಲಿ ಭಾಗವಹಿಸಿದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.
- 6 ತಿಂಗಳು ಕಾಲ ಮುಷ್ಕರ ತಡೆಯಲಾಗುತ್ತದೆ.
- ಸಾರ್ವಜನಿಕರ ಸಾರಿಗೆ ಹಕ್ಕು ಹಾನಿಯಾಗದಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಸಂಘಟನೆಗಳ ಪ್ರತಿಕ್ರಿಯೆ?
ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಜಂಟಿ ಕ್ರಿಯಾ ಸಮಿತಿಯು, ಸರ್ಕಾರ ಮುಷ್ಕರದ ಬೆನ್ನಲ್ಲೇ ಸ್ಪಂದಿಸಿಲ್ಲ ಎಂದಿದ್ದರೂ ಇದೀಗ ಎಸ್ಮಾ ಜಾರಿಯಿಂದ ತಮ್ಮ ಹೋರಾಟಕ್ಕೆ ಅಡ್ಡಿ ಉಂಟಾಗಿದೆ. ಮುಂದಿನ ಹಂತದ ತೀರ್ಮಾನಕ್ಕಾಗಿ ಸಂಘಟನೆಗಳು ಗುರ್ತಿಸಿಕೊಂಡು ಚರ್ಚೆ ನಡೆಸಲಿವೆ ಎನ್ನಲಾಗಿದೆ.