ಬೆಂಗಳೂರು: ಕರ್ನಾಟಕದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ತಾತ್ವಿಕವಾಗಿ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ಮೋಡಗಿಸಿದ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲ್, ಕರ್ನಾಟಕದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ತಾತ್ವಿಕವಾಗಿ ಅನುಮೋದನೆ ನೀದಲಾಯಿತು ಎಂದು ತಿಳಿಸಿದರು.
ರಾಜ್ಯದಲ್ಲಿ ಗುರುತಿಸಲಾದ ಸಂಭಾವ್ಯ ಸ್ಥಳಗಳಲ್ಲಿ ಪ್ರಾಥಮಿಕ ಅಧ್ಯಯನ ನಡೆಸಲು NTPC (ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ) ಗೆ ಅನುಮತಿ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ “A” ಮತ್ತು “B” ಖಾತಾಗಳನ್ನು (ಆಸ್ತಿ ಮಾಲೀಕತ್ವ ದಾಖಲೆಗಳು) ನೀಡುವುದನ್ನು ನಿಯಂತ್ರಿಸುವ ಬಗ್ಗೆ ತೀರ್ಮಾನಿಸಲಾಯಿತು ಎಂದವರು ವಿವರಿಸಿದರು.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಸಿರಿವರ ಗ್ರಾಮದಲ್ಲಿ 194.33 ಎಕರೆ ಸರ್ಕಾರಿ ಭೂಮಿಯಲ್ಲಿ ಪಿಪಿಪಿ ಮಾದರಿಯಲ್ಲಿ 83.79 ಕೋಟಿ ರೂ. ಅಂದಾಜು ವೆಚ್ಚದಲ್ಲಿ ತೋಟಗಾರಿಕೆ ತಂತ್ರಜ್ಞಾನ ಉದ್ಯಾನವನ ಸ್ಥಾಪಿಸಲು ಅನುಮೋದನೆ ನೀಡಲಾಯಿತು. ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಹೋಬಳಿಯ ಯರಮರೇನಹಳ್ಳಿ ಗ್ರಾಮದಲ್ಲಿ 5 ಎಕರೆ 23 ಗುಂಟೆ ಸರ್ಕಾರಿ ಭೂಮಿಯನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗಾಗಿ ಅಕ್ಷಯ ಪಾತ್ರ ಅಡುಗೆಮನೆ ಮತ್ತು ಶಾಲಾ ಕಟ್ಟಡ ನಿರ್ಮಿಸಲು ಇಸ್ಕಾನ್ ಬೆಂಗಳೂರಿನ ಇಸ್ಕಾನ್ ಸಂಸ್ಥೆಗೆ ಹಂಚಿಕೆಬಗ್ಗೆಯೂ ತೀರ್ಮಾನಿಸಲಾಯಿತು ಎಂದವರು ವಿವರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ವೀರಭದ್ರಪಾಳ್ಯ ಗ್ರಾಮದ ಸರ್ವೆ ಸಂಖ್ಯೆ 66 ರಲ್ಲಿ 15 ಗುಂಟೆ ಸರ್ಕಾರಿ ಭೂಮಿಯನ್ನು ಕಾಂಗ್ರೆಸ್ ಪಕ್ಷದ ಕಚೇರಿ ಕಟ್ಟಡ ನಿರ್ಮಿಸಲು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಹಂಚಿಕೆ ಬಗ್ಗೆಯೂ ಸಂಪುಟ ಸಭೆ ತೀರ್ಮಾನಿಸಿದೆ.
ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಲಿಮಿಟೆಡ್ (ಕೆಟಿಐಎಲ್) ಮೂಲಕ ಡಿಬಿಎಫ್‌ಒಟಿ ಮಾದರಿಯಡಿಯಲ್ಲಿ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ವಿಜಯಪುರವನ್ನು ಒಳಗೊಂಡ ಉತ್ತರ ಕರ್ನಾಟಕ ಪ್ರವಾಸೋದ್ಯಮ ಸರ್ಕ್ಯೂಟ್‌ನ ಅಭಿವೃದ್ಧಿಗೆ 166.22 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅನುಮೋದನೆ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಅಲ್ಪಸಂಖ್ಯಾತ ಬಾಲಕಿಯರಿಗಾಗಿ 17.09 ಕೋಟಿ ರೂ. ಅಂದಾಜು ವೆಚ್ಚದಲ್ಲಿ 400 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ ವಸತಿ ಪೂರ್ವ ಕಾಲೇಜು ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿಯಲ್ಲಿ ಒಟ್ಟು 64 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಾಲ್ಕು ವಸತಿ ಶಾಲೆ ಮತ್ತು ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆನೀಡಲಾಯಿತು ಎಂದು ಸಚಿವ ಹೆಚ್.ಕೆ.ಪಾಟೇಲ್ ತಿಳಿಸಿದರು.