ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರದೊಳಗಿನ ನಾಯಕತ್ವದ ಗದ್ದಲದ ಮಧ್ಯೆ, ಪಕ್ಷದೊಳಗೆ ಶಾಸಕರ ಕುದುರೆ ವ್ಯಾಪಾರ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ‘ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು ಹತಾಶೆಗೊಂಡಿದ್ದಾರೆ ಎಂದು ಜನರು ಈಗಾಗಲೇ ನೋಡುತ್ತಿದ್ದಾರೆ. ಅವರು ದಿಕ್ಕಿಲ್ಲದವರಾಗಿದ್ದಾರೆ ಮತ್ತು ಯಾರನ್ನು ಬೆಂಬಲಿಸಬೇಕೆಂದು ಅವರಿಗೆ ತಿಳಿದಿಲ್ಲ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಬಲಿಸಬೇಕೆ ಎಂಬ ಗೊಂದಲದಲ್ಲಿದ್ದಾರೆ’ ಎಂದು ವಿಶ್ಲೇಷಿಸಿದರು.
‘ಕಾಂಗ್ರೆಸ್ ಪಕ್ಷದೊಳಗೆ ಕುದುರೆ ವ್ಯಾಪಾರ ವೇಗದಲ್ಲಿ ನಡೆಯುತ್ತಿದೆ ಎಂದ ವಿಜಯೇಂದ್ರ, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರ್ನಾಟಕಕ್ಕೆ ಪದೇ ಪದೇ ಭೇಟಿ ನೀಡಿ ತಮ್ಮ ಪಕ್ಷದ ಶಾಸಕರನ್ನು ಭೇಟಿಯಾಗುತ್ತಿರುವುದು ಏಕೆ? ಇದರ ಅರ್ಥವೇನು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆಯು ಆ ಪಕ್ಷದ ಶಾಸಕರು ಸಿಎಂ ಸಿದ್ದರಾಮಯ್ಯ ಅವರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ. ಪರಿಣಾಮವಾಗಿ, ಸುರ್ಜೇವಾಲಾ ಬೆಂಗಳೂರಿಗೆ ಪ್ರವಾಸ ಮಾಡಿ ಅವರನ್ನು ಮನವೊಲಿಸುತ್ತಿದ್ದಾರೆ. ಸುರ್ಜೇವಾಲಾ ಅವರು ಮುಖ್ಯಮಂತ್ರಿಗೆ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ” ಎಂದು ವಿಜಯೇಂದ್ರ ಹೇಳಿದರು.