ಬೆಂಗಳೂರು: ದೇವನಹಳ್ಳಿ ಸುತ್ತಮುತ್ತ ಕೆಐಎಡಿಬಿ ಭೂ ಸ್ವಾಧೀನ ಹಗರಣ ಕುರಿತಂತೆ ವಿವಾದ ಎದ್ದ ಬೆನ್ನಲ್ಲೇ ರಾಜ್ಯ ಸರ್ಕಾರವು ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿರುವುದಾಗಿ ಘೋಷಿಸಿವೆ. ರಾಜ್ಯ ಸರ್ಕಾರದ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೇವನಹಳ್ಳಿಯಲ್ಲಿ ಏರೋಸ್ಪೇಸ್ ಉದ್ಯಮ ಸ್ಥಾಪನೆಗೆ ಕೈಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿರುವ ನಿರ್ಧಾರದಿಂದ ರಾಜ್ಯಕ್ಕೆ ಭಾರೀ ಹಿನ್ನಡೆಯಾಗಲಿಡೇ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಉದ್ಯಮಗಳು ಹಾಗೂ ಉದ್ಯೋಗ ಸೃಷ್ಟಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಈ ನಡುವೆ, ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ, ರೈತರ ಹಿತದೃಷ್ಟಿಯಿಂದ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ರೈತರ ಹಿತದೃಷ್ಟಿಯಿಂದ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ.
– ಮುಖ್ಯಮಂತ್ರಿ @siddaramaiah pic.twitter.com/2SkRqpbT2y
— CM of Karnataka (@CMofKarnataka) July 15, 2025
ಇದೇ ವೇಳೆ, ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟರೆ ಸಾಲದು, ಈ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆಗಿರುವ ಅವ್ಯವಹಾರ ಕುರಿತಂತೆ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ದೇವನಹಳ್ಳಿ ಭೂಸ್ವಾಧೀನ ಅಕ್ರಮದ ವಿರುದ್ಧ ಕಾನೂನು ಸಮರ ಕೈಗೊಂಡಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಕೂಡಾ ಕೆಐಎಡಿಬಿ ಅಕ್ರಮಗಳ ಬಗ್ಗೆ ಸಂಗ್ರ ತನಿಖೆ ನಡೆಸಬೇಕಿದೆ ಎಂದು ಪ್ರತಿಕ್ರಿಯಿಸಿದೆ. ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ಧ ಈಗಾಗಲೇ ಪ್ರಧಾನಿ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದು, ರಾಜ್ಯ ಸರ್ಕಾರ ಕೂಡಾ ತನಿಖೆ ನಡೆಸಬೇಕೆಂದು ವಕ್ತಾರರು ಸಿಎಂ ಅವರನ್ನು ಒತ್ತಾಯಿಸಿದ್ದಾರೆ.