ಕೊಪ್ಪಳ: ಮುಖ್ಯಮಂತ್ರಿ ಆಗಲು ಡಿ.ಕೆ. ಶಿವಕುಮಾರ್ ಅವಕಾಶ ಕೊಡುವವರು ಸಿದ್ದರಾಮಯ್ಯ ಅಲ್ಲ. ಸಿದ್ದರಾಮಯ್ಯ ಮುಂದುವರಿಯಲು ಡಿ.ಕೆ.ಶಿವಕುಮಾರ್ ಒಪ್ಪಲ್ಲ. ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನೂ ಮುಂದಕ್ಕೆ ಬರಲು ಬಿಡುತ್ತಿಲ್ಲ. ಈ ಅಂತರಿಕ ಕಲಹದಿಂದಲೇ ಸರ್ಕಾರ ಉರುಳಲಿದೆ, ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಮಾಜವಾದಿ ಅಲ್ಲ, ಮಜಾವಾದಿ. ಅಧಿಕಾರಕ್ಕಾಗಿ ಅವರು ಯಾವ ಪಕ್ಷಕ್ಕೂ ಹೋಗಬಲ್ಲವರು. ಅವರು ಮೂಲ ಕಾಂಗ್ರೆಸ್ಸಿಗರು ಅಲ್ಲ. ಹತ್ತಿರದಿಂದ ನೋಡಿದರೆ ಇಂದಿಗೂ ಅತೃಪ್ತರಾಗಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ಎಲ್ಲೆಲ್ಲಿ ಹೋಗಿದ್ದಾರೆ ಅಲ್ಲಿ ಮಜಾ ಉಡಾಯಿಸಿದ್ದಾರೆ. ವಸತಿ ಇಲಾಖೆಯಲ್ಲಿ ಹಗರಣ ನಡೆದಿರುವುದಕ್ಕೂ ಬದ್ಧವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಉಳಿಸಿಕೊಂಡಿದ್ದಾರೆ. ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗಿತ್ತು. ಕಾಂಗ್ರೆಸ್‌ನ ನಾಯಕರು ತಾವೇ ಭ್ರಷ್ಟಾಚಾರದ ಆರೋಪವನ್ನೆತ್ತುತ್ತಿದ್ದಾರೆ ಎಂದು ಕಟೀಲ್ ಕಿಡಿಕಾರಿದರು.

























































