ಬೆಂಗಳೂರು: ವಿದ್ಯುತ್ ಸ್ಮಾರ್ಟ್ ಮೀಟರ್ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದು ರಾಜ್ಯ ಸರ್ಕಾರವಲ್ಲ. ನಿಮ್ಮ ವಿಶ್ವಗುರು ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ ಕೇಂದ್ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದಿರುವುದು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಬಿಜೆಪಿ ಮುಖಂಡರಾದ ಅಶ್ವತ್ಥ್ ನಾರಾಯಣ, ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಅವರು ಕಳೆದ ಎರಡು ತಿಂಗಳಿಂದ ಸ್ಮಾರ್ಟ್ ಮೀಟರ್ ವಿಚಾರವಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಈ ಸ್ಮಾರ್ಟ್ ಮೀಟರ್ ಪರಿಕಲ್ಪನೆ ಬಿಜೆಪಿ ಸರ್ಕಾರದ್ದು ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ನಾಯಕ ಲಕ್ಷ್ಮಣ್ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕರೂ ಆದ ರಮೇಶ್ ಬಾಬು, ಸುಳ್ಳು ಬಿಜೆಪಿಯ ಮನೆ ದೇವರು ಎಂದು ನಮ್ಮ ಸಿಎಂ ಹಾಗೂ ಡಿಸಿಎಂ ಹೇಳುತ್ತಲೇ ಇರುತ್ತಾರೆ. ಕರ್ನಾಟಕದ ನವರಂಗಿ ನಾಟಕಕಾರ ಡಾ.ಅಶ್ವತ್ಥ್ ನಾರಾಯಣ ಅವರು ಇಂಧನ ಸಚಿವಾಲಯದ ಮೇಲೆ ಮಾಡಿರುವ ಆರೋಪವನ್ನು ಎರಡು ದೃಷ್ಟಿಕೋನಗಳಲ್ಲಿ ನೋಡಬೇಕಾಗಿದೆ. ರಾಜ್ಯದಲ್ಲಿ ಬೇನಾಮಿ ವ್ಯವಹಾರಗಳಿಗೆ ಖ್ಯಾತಿ ಪಡೆದಿರುವ ಅಶ್ವತ್ಥ್ ನಾರಾಯಣ ಅವರು ಟೆಂಡರ್ ಪಡೆಯಲು ಪ್ರಯತ್ನಿಸಿದ್ದರಾ? ಅದು ಸಿಗದ ಕಾರಣಕ್ಕೆ ಆರೋಪ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಇದೆ. ಜಾರ್ಜ್ ಅವರು ಈ ರಾಜ್ಯ ಕಂಡ ಯಶಸ್ವಿ ಸಚಿವರು. ಅಲ್ಪಸಂಖ್ಯಾತ ಸಮುದಾಯದ ನಾಯಕ ಜಾರ್ಜ್ ಅವರ ಮೇಲೆ ಬಿಜೆಪಿ ನಾಯಕರು ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ರಮೇಶ್ ಬಾಬು ದೂರಿದರು.
ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾಗೆ ಪೂರಕವಾಗಿ ತೆಗೆದುಕೊಂಡಿರುವ ತೀರ್ಮಾನವೇ ಹೊರತು, ರಾಜ್ಯ ಸರ್ಕಾರದ ತೀರ್ಮಾನವಲ್ಲ. ರಾಜ್ಯ ಇಂಧನ ಸಚಿವಾಲಯದ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರವೇ ಶ್ಲಾಘಿಸಿರುವ ಅನೇಕ ಉದಾಹರಣೆಗಳಿವೆ ಎಂದರು
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಂಬಂಧಿಸಿದಂತೆ, ಬೇನಾಮಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ದೊಡ್ಡ ಸದ್ದು ಮಾಡಿದ್ದು ಚಿಲುಮೆ ಸಂಸ್ಥೆ. ಇದರ ತನಿಖೆ ಇನ್ನು ಬಾಕಿ ಇದ್ದು, ಇದರ ಕಾರಣಕರ್ತ, ಮೂಲ ಜನಕ ಯಾರು ಎಂದು ಅಶ್ವತ್ಥ್ ನಾರಾಯಣ ಅವರೇ ಹೇಳಬೇಕು. ಇಡೀ ರಾಜ್ಯದ ಜನರಿಗೆ ಅಶ್ವತ್ಥ್ ನಾರಾಯಣ ಎಂದರೆ ನೆನಪಾಗುವ ಮತ್ತೊಂದು ಹೆಸರು ಹೊಂಬಾಳೆ. ಹೊಂಬಾಳೆ ಕನ್ಸ್ ಟ್ರಕ್ಷನ್ ವಿತರಕರು, ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಆಗಿರುವ ಆನಾಹುತಗಳ ಬಗ್ಗೆ ಜನರಿಗೆ ತಿಳಿದಿದೆ ಎಂದವರು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಂಬುಲೆನ್ಸ್ ನಲ್ಲಿ ನಡೆದ ಅವ್ಯವಹಾರ ಬಗ್ಗೆ ಅಶ್ವಥ್ ನಾರಾಯಣ ಅವರೇ ಹೇಳಬೇಕು. ಜಾರ್ಜ್ ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಅವರ ವಿರುದ್ಧ ನೀವು ಚಿತಾವಣೆ ಮಾಡುತ್ತಿದ್ದು, ಇದಕ್ಕಾಗಿ ನಿಮಗೆ ಎಲ್ಲಿಂದ ಆದೇಶ ಬರುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟುನೋಡಿಕೊಳ್ಳುವ, ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬ ಗಾದೆ ಅಶ್ವತ್ಥ್ ನಾರಾಯಣ ಅವರಿಗೆ ಸೂಕ್ತವಾಗುತ್ತದೆ. ರಾಜ್ಯ ಇಂಧನ ಇಲಾಖೆಯ ಸ್ಮಾರ್ಟ್ ಮೀಟರ್ ಇಲಾಖೆ ನಿರ್ದೇಶನ ಹಾಗೂ ಕೇಂದ್ರ ಸಚಿವರು ಎಲ್ಲಾ ರಾಜ್ಯಗಳ ಇಂಧನ ಸಚಿವ ಸಭೆಯಲ್ಲಿ ನೀಡಿದ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 3 ಕೋಟಿ ಮೀಟರ್ ಗಳಿದ್ದು, ಇಂಧನ ಇಲಾಖೆ ತೀರ್ಮಾನ ಮಾಡುವಾಗ ಇಂಧನ ನಿಯಂತ್ರಣ ಆಯೋಗದ ಆದೇಶದಂತೆ ತೆಗೆದುಕೊಳ್ಳಬೇಕು ಎಂದು ರಮೇಶ್ ಬಾಬು ಹೇಳಿದರು.
ಸ್ಮಾರ್ಟ್ ಮೀಟರ್ ವಿಚಾರವಾಗಿ ಕಳೆದ ತಿಂಗಳು ಅವರು ಕೆಲವು ಆದೇಶ ನೀಡಿದ್ದು ಅದರಂತೆ ಸರ್ಕಾರ ತೀರ್ಮಾನ ಮಾಡಿದೆ. ಅಶ್ವತ್ಥ್ ನಾರಾಯಣ ಅವರು ತಮ್ಮ ಊಹೆಗೆ ತಕ್ಕಂತೆ 900 ರೂ.ಗೆ ಸ್ಮಾರ್ಟ್ ಮೀಟರ್ ಸಿಗುತ್ತದೆ ಎಂದು ತಿಳಿಸಿದ್ದಾರೆ. ಇದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ನೀಡಿರುವ ಸಬ್ಸಿಡಿ ಯೋಜನೆ ಮೊತ್ತ. 27 ರಾಜ್ಯಗಳು ಈ ಸಬ್ಸಿಡಿ ಪಡೆದು ಸ್ಮಾರ್ಟ್ ಮೀಟರ್ ಅಳವಡಿಸುತ್ತಿವೆ. ಇದು ಮೀಟರ್ ಮೊತ್ತ ಅಲ್ಲ. ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ ಕೇಂದ್ರಕ್ಕೆ ಪತ್ರ ಬರೆದು ಆರ್ ಡಿಎಸ್ಎಸ್ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅದನ್ನು ಮಾಡಿದರೆ ರೈತರಿಗೆ ವಾರ್ಷಿಕವಾಗಿ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆಯನ್ನು ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಇದನ್ನು ನಿಲ್ಲಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಆರ್ ಡಿಎಸ್ಎಸ್ ಯೋಜನೆಯಲ್ಲಿ ಬರುವ ಸಬ್ಸಿಡಿ ಮೊತ್ತವನ್ನು ಮೀಟರ್ ಮೊತ್ತ ಎಂದು ಹೇಳಿ ಜನರ ಕಿವಿಗೆ ಚೆಂಡುವ್ವ ಮುಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಶ್ವತ್ಥ್ ನಾರಾಯಣ ಅವರ ಸುಳ್ಳು ಪ್ರಚಾರದ ವಿರುದ್ಧ ಪ್ರತಿಭಟನೆಗಾಗಿ ಕೆಪಿಸಿಸಿ ವತಿಯಿಂದ ಕೇಂದ್ರ ಇಂಧನ ಸಚಿವ ಖಟ್ಟರ್ ಅವರಿಗೆ ಪತ್ರ ಬರೆಯುವ ಮೂಲಕ ಲಿಖಿತ ದೂರನ್ನು ನೀಡಲಿದೆ. ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಗಡುವು ನೀಡುತ್ತಿರುವಾಗ, ಕೇಂದ್ರ ಸರ್ಕಾರದ ನೀತಿಗೆ ವಿರುದ್ಧವಾಗಿ ಈ ಯೋಜನೆ ತಡೆಯುವ ಪ್ರಯತ್ನವನ್ನು ಅಶ್ವತ್ಥ್ ನಾರಾಯಣ ಅವರು ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಒಳಸಂಚನ್ನು ಖಟ್ಟರ್ ಅವರಿಗೆ ತಿಳಿಸುತ್ತಿದ್ದೇವೆ ಎಂದರು.
ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ದರ 4900 ರೂ. ಇದ್ದು, ಬಿಜೆಪಿ ಸರ್ಕಾರ ಮಹಾರಾಷ್ಟ್ರದಲ್ಲಿ 6700 ರೂ. ಹಾಗೂ ಮಧ್ಯಪ್ರದೇಶದಲ್ಲಿ 5357 ರೂ. ನಿಗದಿ ಮಾಡಲಾಗಿದೆ. ಜನರ ಹಾದಿ ತಪ್ಪಿಸಲು ಇಂಧನ ಇಲಾಖೆಯಲ್ಲಿ ಆಗುತ್ತಿರುವ ಅಭಿವೃದ್ಧಿ ತಡೆಯಲು ಅಶ್ವತ್ಥ್ ನಾರಾಯಣ ಅವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಮೇಶ್ ಬಾಬು ತರಾಟೆಗೆ ತೆಗೆದುಕೊಂಡರು.
2013ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಬರುವ ಮುನ್ನ ಕರ್ನಾಟಕ ರಾಜ್ಯ ವಿದ್ಯುತ್ ಉತ್ಪಾದನೆ ಹೆಚ್ಚಾಗಿ ಇಲ್ಲದೆ ಬೇರೆ ರಾಜ್ಯಗಳ ಮೇಲೆ ಅವಲಂಬನೆಯಾಗಿತ್ತು. ಯಡಿಯೂರಪ್ಪ ಅವರ ಸರ್ಕಾರದಲ್ಲಿ ವಿದ್ಯುತ್ ಇಲಾಖೆಯಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡದೇ ಆಗಿನ ಇಂಧನ ಸಚಿವ ಈಶ್ವರಪ್ಪ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ್ದರು. ನಂತರ ಶೋಭಾ ಕರಂದ್ಲಾಜೆ ಅವರು ಇಂಧನ ಸಚಿವರಾದ ನಂತರ ಎಷ್ಟೆಲ್ಲಾ ಅವ್ಯವಹಾರ ಮಾಡಿರುವುದು ದಾಖಲೆಗಳಲ್ಲಿ ಉಳಿದಿದೆ. ಇಂತಹ ಹಿನ್ನೆಲೆ ಇರುವ ಬಿಜೆಪಿಯವರು ಕಾಂಗ್ರೆಸ್ ಸರ್ಕಾರಕ್ಕೆ ಬೋಧನೆ ಮಾಡುವ ಅಗತ್ಯವಿಲ್ಲ ಎಂದು ರಮೇಶ್ ಬಾಬು ತಮ್ಮದೇ ಶೈಲಿಯಲ್ಲಿ ಎದಿರೇಟು ನೀಡಿದರು.