ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಮತ್ತು ಇತರರು ಭಾಗಿಯಾಗಿದ್ದಾರೆನ್ನಲಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣದ ಲೋಕಾಯುಕ್ತ ತನಿಖೆಯು ತನಿಖೆಯ ಸಮಗ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಲೋಕಾಯುಕ್ತವು “B ರಿಪೋರ್ಟ್” ಸಲ್ಲಿಸುವ ಮೂಲಕ ತನಿಖೆಯನ್ನು ಹಠಾತ್ತನೆ ಮುಕ್ತಾಯಗೊಳಿಸುವ ಮೊದಲು ಸಿದ್ದರಾಮಯ್ಯ ಅವರಿಗೆ ಕೇವಲ 30 ಪ್ರಶ್ನೆಗಳನ್ನು ಕೇಳಲಾಗಿತ್ತು ಎನ್ನಲಾಗುತ್ತಿದೆ. ಈ ತ್ವರಿತ ತೀರ್ಮಾನವು ಅನೇಕ ಅನುಮಾನಗಳನ್ನು ಹುಟ್ಟುಹಾಕಿವೆ ಎಂದು ತಜ್ಞರು ಹೇಳುತ್ತಿದ್ದಾರೆ.
ಕಳವಳಕಾರಿ ಸಂಗತಿಯೆಂದರೆ ಲೋಕಾಯುಕ್ತವು ಜಾರಿ ನಿರ್ದೇಶನಾಲಯದ (ED) ನಿರ್ಣಾಯಕ ನಡೆಯನ್ನು ‘ಕಡೆಗಣಿಸಿದೆ’. ಈ ಹಗರಣ ಆರೋಪದಲ್ಲಿ ED ಅನೇಕರ ವಿಚಾರಣೆಗೆ ಸಿದ್ಧತೆ ನಡೆಸಿರುವ ವಿಚಾರ ಅದಾಗಲೇ ಬಹಿರಂಗವಾಗಿದ್ದರೂ ಈ ಗಂಭೀರತೆ ಬಗ್ಗೆ ಲೋಕಾಯುಕ್ತ ಪೊಲೀಸರು ಗಮನಹರಿಸದೇ ತನಿಖೆ ಪೂರ್ಣಗೊಳಿಸಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡುವ ಆತುರದಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದಾರೆಯೇ ಎಂಬ ಅನುಮಾನ ಪ್ರತಿಪಕ್ಷಗಳದ್ದು.