ಬೆಂಗಳೂರು: ನಾಡಿನ ರಕ್ಷಣೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಪೊಲೀಸರಲ್ಲೇ ಇದೀಗ ಅಭದ್ರತೆ ಕಾಡುವಂತಿದೆ. ಪೊಲೀಸರು ತಮ್ಮ ಸಹೋದ್ಯೋಗಿಗಳಿಂದಲೇ ಕಿರುಕುಳಕ್ಕೆ ಒಳಗಾಗುತ್ತಿರುವ ಬಗ್ಗೆ ಸುದ್ದಿಯೊಂದು ಬೆಂಗಳೂರು ಪೊಲೀಸ್ ಪಾಳಯದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಕೆಯಾಗಿರುವ ದೂರಿನ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬೆಂಗಳೂರಿನ ಮೈಸೂರು ರಸ್ತೆ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬಂದಿ ‘ತಾವು ನೊಂದವರು’ ಎಂದು ಹೇಳಿಕೊಂಡಂತಿರುವ ದೂರು ಕುರಿತಂತೆ ಸಾರ್ವಜನಿಕ ವಲಯದಲ್ಲೂ ಭಾರೀ ಚರ್ಚೆ ನಡೆದಿದೆ.
ದೂರಿನಲ್ಲಿ ಏನಿದೆ?
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ 2 ವರ್ಷಗಳಿಂದ ಎಸ್.ಬಿ. ಕರ್ತವ್ಯ ನಿರ್ವಹಿಸುತ್ತಿರುವ ಹಿತೇಂದ್ರ ಎಂಬವರು ಪಿ.ಎಸ್.ಐ ಮತ್ತು ಇತರ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಬಗ್ಗೆ ಹಾಗೂ ಭ್ರಷ್ಟಚಾರ ವಿರುದ್ಧ ಈ ದೂರಿನಲ್ಲಿ ಆರೋಪ ಮಾಡಲಾಗಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎರಡು ಮೂರು ವರ್ಷಗಳಿಂದ ಎಸ್.ಬಿ ಕರ್ತವ್ಯ ನಿರ್ವಹಿಸುತ್ತಿರುವ ಹಿತೇಂದ್ರ ಎಂಬವರು ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಹೆಸರನ್ನು ಮತ್ತು ಅಧಿಕಾರಿಗಳನ್ನು ಸಿಬ್ಬಂದಿವರ್ಗದವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ವರ್ಗದವರನ್ನು ಕೂಲಿಯಾಳುಗಳಂತೆ ಹಾಗೂ ಅಧಿಕಾರಿಗಳನ್ನು ಮೇಸ್ತ್ರಿಗಳಂತೆ ನೋಡುತ್ತಿದ್ದಾರೆ. ಇವರು ಈ ಮುಂಚೆ ಕೆಲವು ಕಾರಣಗಳಿಂದ ಬ್ಯಾಟರಾಯನಪುರ ಪೊಲೀಸ್ ಠಾಣೆಯಿಂದ ಸಿಇಎನ್ ಪಶ್ಚಿಮ ವಿಭಾಗದಲ್ಲಿ ಓಓಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಮತ್ತೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಬಂದು ಎಸ್.ಬಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಗಿನಿಂದಲು ಸಿಬ್ಬಂಧಿಗಳಿಗೆ ಒಂದಲ್ಲ ಒಂದು ರೀತಿಯಾಗಿ ಚಿತ್ರವಿಚಿತ್ರವಾಗಿ ಅವಾಚ್ಯ ಶಬ್ದಗಳಿಂದ ಬಯ್ಯುವುದು, ‘ನೀವು ಗೌಡ ನಾಯಕ ಲಮಾಣಿ ಮತ್ತೆ ಸಾಬ್ರು ನನ್ನ ಏನು ಮಾಡಲಿಕ್ಕೆ ಆಗೋಲ್ಲಾ. ಏಕೆಂದರೆ ನಾನು ಲಿಂಗಾಯತ ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಸಾಹೇಬರು ನಮ್ಮ ಸೋಮಣ್ಣ ಸಾಹೇಬರು ಅವರೇ ನನ್ನನ್ನು ಎಸ್.ಬಿ ಮಾಡಿರುವುದು. ಯಾವ ಡಿಸಿಪಿ, ಎಸಿಪಿ ನನ್ನನ್ನು ಏನು ಮಾಡಲಿಕ್ಕೆ ಆಗೋಲ್ಲ ಎಂದು ಜಾತಿ ನಿಂದನೆ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಪ್ರಾದೇಶಿಕ ತಾರತಮ್ಯ ಮಾಡುತ್ತಾರೆ ಹಾಗೂ ರಾತ್ರಿ ವೇಳೆಯಲ್ಲಿ ಕುಡಿದು ಬೀಟ್ ಸಿಬ್ಬಂದಿಗಳಿಗೆ ಬಾಯಿಗೆ ಬಂದ ಹಾಗೆ ಬಯ್ಯತ್ತಾರೆ, ಇದೇ ರೀತಿಯಾಗಿ ಒಂದಲ್ಲ ಒಂದು ರೀತಿಯಲ್ಲಿ ವಿಚಿತ್ರವಾಗಿ ನಮಗೆ ತೊಂದರೆ ನೀಡುತ್ತಿರುತ್ತಾರೆ, ದಿನಾಂಕ 21.09.2024 ರಂದು ನೈಸ್ ರಸ್ತೆಯ ಬಳಿ ಪೊಲೀಸ್ ಸಿಬ್ಬದಿಯು ರಾತ್ರಿ ಬೀಟ್ ಕರ್ತವ್ಯ ನಿರ್ವಹಿಸುತ್ತಿರುವಾಗ ಅವರಲ್ಲಿಗೆ ಕುಡಿದು ಬಂದು ಧನ ಕಾಯೋಕೆ ಹೋಗಿ *** ಮಕ್ಕಳ ಸಾಬ್ರು ನನ್ನ ಮಗನೆ ನೀವು ಪೊಲೀಸ್ ಕೆಲಸಕ್ಕೆ ನಾಲಯಕ್ಕು ನೀವು ಹೋಂ ಗಾರ್ಡ್‌ಗೂ ಲಾಯಕಿಲ್ಲ ನನ್ನ ನೋಡಿ ಕಲೀರಿ ನಾನು ಒಬ್ಬ ಸಿಎಂ ಮೆಡಲಿಸ್ಟ್ ಕಂಡೋ ** ಮಕ್ಕಳ ಎಂದು ಬೈದಿರುತ್ತಾರೆ. ಇದು ಒಂದು ಪ್ರಸಂಗವಾದರೆ ಇದೇ ರೀತಿ ತುಂಬ ಉದಾಹರಣೆಗಳಿವೆ’ ಎಂದು ಆ ದೂರಿನ ಪ್ರತಿಯಲ್ಲಿ ಗಮನಸೆಳೆಯಲಾಗಿದೆ.
2024 ರ ಏಪ್ರಿಲ್ ತಿಂಗಳಿನಲ್ಲಿ ರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ಬಾಪೂಜಿನಗರ ಆರ್ಚ್ ಬಳಿ ಪೊಲೀಸ್ ಸಿಬ್ಬಂದಿ ಗಸ್ತಿನಲ್ಲಿ ಇರುವಾಗ ಯಾರೋ ಮೂರು ನಾಲ್ಕು ಜನ ವ್ಯಕ್ತಿಗಳು ಒಬ್ಬನಿಗೆ ಹಲ್ಲೆ ಮಾಡಿ ಓಡಿಹೋದರು ಅದರಲ್ಲಿ ಇಬ್ಬರೂ ತಮಗೆ ಸಿಕ್ಕರೂ ನಂತರ ಆ ಸ್ಥಳಕ್ಕೆ ಕುಡಿದು ಬಂದ ಆ ವ್ಯಕ್ತಿ ಆ ಇಬ್ಬರ ಹತ್ತಿರ ಮಾತನಾಡಿಕೊಂಡು ‘ನಾನು ನಿಮಗೆ ಏನು ಮಾಡುವುದಿಲ್ಲ, ಎಫ್‌ಐಆರ್ ಕೂಡ ಮಾಡುವುದಿಲ್ಲ’ ಎಂದು ಹೇಳಿ ಅವರ ಪೋನ್ ನಂಬರ್ ನಿಂದ ಗಾಳಿ ಆಂಜನೇಯ ದೇವಾಸ್ಥನದ ಬಳಿ ಇರುವ ಬೆನಕಾ ವೈನ್ಸ್‌ನ ಪ್ರಸನ್ನ ಎಂಬ ಕ್ಯಾಷಿಯರ್ ಖಾತೆಗೆ 97000 ಹಣವನ್ನು ಪೋನ್‌ಪೇ ಹಾಗೂ 40000ರೂ ಹಣವನ್ನು ನಗದಾಗಿ ಹಣವನ್ನು ಪಡೆದಿದ್ದು ಈ ವಿಚಾರ ಯಾರಿಗಾದರು ಹೇಳಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಎಸ್‌ಐ ಎಂದೂ ನೋಡದೆ ಏರು ಧ್ವನಿಯಲ್ಲಿ ಬಯ್ದಿರುತ್ತಾರೆ ಎಂದು ಆರೋಪ ಬಗ್ಗೆ ಉಲ್ಲೇಖಿಸಲಾಗಿರುವ ದೂರಿನಲ್ಲಿ, ಬೆನಕ ವೈನ್ಸ್‌ನ ಕ್ಯಾಷಿಯರ್ ಪ್ರಸನ್ನ ಎಂಬುವವರನ್ನು ಕರೆದು ವಿಚಾರಿಸಿ ಒಬ್ಬ 29 ವರ್ಷ ಸೇವೆ ಸಲ್ಲಿಸಿದ ಎಎಸ್‌ಐಗೆ ನ್ಯಾಯ ದೋರಕಿಸಿಕೊಡಿ ಎಂದು ಆಯುಕ್ತರಿಗೆ ಮನವಿ ಮಾಡಲಾಗಿದೆ.
03.08.2024ರಂದು ಯುಡಿಆರ್ ಸಂಖ್ಯೆ 071/2024 194 ಪ್ರಕರಣದಲ್ಲಿ ಠಾಣಾಧಿಕಾರಿಗಳ ಗಮನಕ್ಕೆ ತಾರದೆ ಫ್ಯಾಕ್ಟರಿಯೊಂದರ ಮಾಲೀಕರಿಂದ 11 ಲಕ್ಷ ರೂಪಾಯಿ ಹಣ ಪಡೆದು ಕರ್ತವ್ಯಲೋಪ ಎಸಗಲಾಗಿದೆ. ‘ಹಳೆಯ ಅಪರಾಧ ವಿಭಾಗದ ಸಿಬ್ಬಂದಿಯನ್ನು ಎಂಎಲ್‌ಎ ಕೃಷ್ಣಪ್ಪ ರವರ ಪಿಎ ರವರ ಸಹಾಯದಿಂದ ಹೇಂಗೇ ಅಪರಾಧ ವಿಭಾಗದಿಂದ ತೆಗೆದು ರಾತ್ರಿ ಡ್ಯೂಟಿಗೆ ಹಾಕಿಸಿದೆ’ ಎಂದು ಠಾಣೆಯ ಸಿಬ್ಬಂದಿ ಬಳಿ ಹೇಳಿ, ‘ನನ್ನನ್ನು ಎದುರು ಹಾಕಿಕೊಂಡರೆ ಠಾಣೆಯಲ್ಲಿ ಯಾರು ಡ್ಯೂಟಿ ಮಾಡ್ತಿರ ನೀವು’ ಎಂದು ದಬ್ಬಾಳಿಕೆ ಮಾಡುತ್ತಿರುತ್ತಾನೆ ಎಂದು ಗಮನಸೆಳೆಯಲಾಗಿದೆ.
ಈ ಹಿಂದೆ ಕಾಮಾಕ್ಷಿಪಾಳ್ಯದಲ್ಲಿ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಸಿ ಸತೀಶ್ ಎಂಬವರು ಸಾಮನ್ಯ ವರ್ಗಾವಣೆಯಲ್ಲಿ ಕಾಮಕ್ಷಿಪಾಳ್ಯ ಠಾಣೆಯಿಂದ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿ ವರದಿಯಾದ ದಿನವೇ ಅವರನ್ನು ಮುಖ್ಯಮಂತ್ರಿರವರ ಕಚೇರಿ ಭದ್ರತೆಗೆ ನಿಯೋಜಿಸಾಲಾಗಿದೆ. ತನ್ನನ್ನು ಎದುರು ಹಾಕಿಕೊಂಡ ಕಾರಣಕ್ಕಾಗಿ ಸತೀಶ್ ಅವರನ್ನು ತಾನೇ ಈ ರೀತಿ ವರ್ಗಾಯಿಸಿರುವುದಾಗಿ ಹೇಳಿ ಇತರ ಸಿಬ್ಬಂದಿಯನ್ನೂ ಆತ ಬೆದರಿಸುತ್ತಿದ್ದಾನೆ ಎಂದು ಪೊಲೀಸ್ ಆಯುಕ್ತರಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಗಮನಸೆಳೆಯಲಾಗಿದೆ.
ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯಿರುವ ಪುಟ್ಪಾತ್ ಅಂಗಡಿಯವರಿಂದ ಆತ ಹಣವನ್ನು ಪಡೆಯುತ್ತಿದ್ದಾಗ ಹೋಯ್ಸಳ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದು, ಅವರನ್ನು ಬೆದರಿಸಿ ಮಾಹಿತಿ ಒದಗಿಸದಂತೆ ತಡೆದಿದ್ದಾರೆ ಎಂಬ ಸಂಗತಿಯನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವ್ಯಕ್ತಿ ಎಸ್‌ಬಿ ಕರ್ತವ್ಯ ನಿರ್ವಹಿಸುತ್ತಿದ್ದಾಗಿನಿಂದ ಠಾಣೆಯಲ್ಲಿ ಸಿಬ್ಬಂದಿಯ ನಡುವೆ ಜಾತಿಯತೆ, ಗುಂಪುಗಾರಿಗೆ ಮತ್ತು ಕೇಳಜಾತಿ-ಮೇಲ್‌ಜಾತಿ ಎಂಬಂತೆ ವೈಮನಸ್ಸು ಮುಡುವಂತೆ ಮಾಡಿದ್ದು ಇದರಿಂದಾಗಿ ಠಾಣೆಯಲ್ಲಿ ಕತವ್ಯ ನಿರ್ವಹಿಸದಂತ ರೀತಿ ವಾತಾವರಣ ಹದೆಗೆಡಿಸಿರುತ್ತಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ ಅಧಿಕಾರಿಗಳು, ಈ ದೂರಿನ ಕುರಿತಂತೆ ತನಿಖೆ ಆರಂಭಿಸಲಾಗಿದೆ ಎಂದು ತಿಳೊಸಿದ್ದಾರೆ.























































