ಬೆಂಗಳೂರು: ‘ಇ ಖಾತಾ’ ವ್ಯವಸ್ಥೆಯನ್ನು ಸರ್ಕಾರ ಸರಳೀಕರಣಗೊಳಿಸಬೇಕು. ಯಾವುದೇ ಲಂಚವಿಲ್ಲದೆ ಜನರು ಸುಲಭವಾಗಿ ಸೇವೆ ಪಡೆಯುವಂತಾಗಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಇ ಖಾತಾ ಮಾಡುವ ಮುನ್ನ ಮಾಹಿತಿ ಪಡೆಯಬೇಕಿತ್ತು. ಇದಕ್ಕೆ ಬೇಕಾದ ದಾಖಲೆ ಯಾವುದು, ಯಾವ ವಿಭಾಗದಲ್ಲಿ ಎಷ್ಟು ಮಾಡಬಹುದು ಎಂದು ಆಲೋಚಿಸಬೇಕಿತ್ತು. ಏಕಾಏಕಿ ಇ ಖಾತಾ ಮಾಡಿರುವುದರಿಂದ ಜನರಿಗೆ ತೊಂದರೆಯಾಗಿದೆ. ಈಗಾಗಲೇ ಅಪ್ಲೋಡ್ ಮಾಡಿರುವ ಇ ಖಾತಾಗಳಲ್ಲಿ ಮಾಲೀಕರ ಹೆಸರು, ಭೂಮಿಯ ಅಳತೆಯಲ್ಲಿ ತಪ್ಪಾಗಿದೆ. ಆಸ್ತಿ ವಿವರ ಸರಿಯಾಗಿ ಸಿಗುತ್ತಿಲ್ಲ. ಎನ್ಆರ್ಐ ಮಾಲೀಕತ್ವದ ಆಸ್ತಿಗೆ ಅಫಿಡವಿಟ್ ಮಾಡಬೇಕಿದೆ. ಈ ಯಾವ ಕೆಲಸಗಳೂ ಆಗಿಲ್ಲ ಎಂದರು.
ಜನರಿಗೆ ಮನೆ ಸಾಲ ಸಿಗಲು ಇ ಖಾತಾ ಬೇಕಾಗುತ್ತದೆ. ದಿನಕ್ಕೆ 5 ರಿಂದ 6 ರಷ್ಟು ಇ ಖಾತಾ ಮಾಡಲಾಗುತ್ತಿದೆ. ಸರ್ಕಾರ ಲಂಚಕ್ಕೆ ಅವಕಾಶ ನೀಡಿ, ಜನರಿಗೆ ತೊಂದರೆ ನೀಡುತ್ತಿದೆ. ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು. ಯಾವುದೇ ಲಂಚವಿಲ್ಲದೆ ಇ ಖಾತಾ ವರ್ಗಾವಣೆಯಾಗಬೇಕು. ನಾನು ಕಂದಾಯ ಸಚಿವನಾಗಿದ್ದಾಗ ಶುಲ್ಕ ಕಡಿಮೆ ಮಾಡಿದ್ದೆ. ಈಗಿನ ಸರ್ಕಾರ ಮುದ್ರಾಂಕ ಶುಲ್ಕವನ್ನು 200-250% ಹೆಚ್ಚಿಸಿದೆ. ಜೊತೆಗೆ ಇ ಖಾತಾ ಬರೆ ಬಿದ್ದಿದೆ. ಸರ್ಕಾರ ಈ ಕುರಿತು ಕ್ರಮ ವಹಿಸದಿದ್ದರೆ ಸಾವಿರಾರು ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದರು.