ಉಡುಪಿ: ಮಾಜಿ ಬಿಜೆಪಿ ಶಾಸಕ ಕೆ. ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅತುಲ್ ರಾವ್ ದೋಷಮುಕ್ತಗೊಂಡಿದ್ದಾರೆ.
2008ರ ಜೂನ್ 19ರಂದು ಮಣಿಪಾಲ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಹದಿನೈದು ವರ್ಷಗಳ ಹಿಂದಿನ ಈ ಪ್ರಕರಣ ಬಗ್ಗೆ ಉಡುಪಿ ಜಿಲ್ಲಾ ಎರಡನೇ ಹೆಚ್ಚವರಿ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ.
2008ರ ಜೂ.10ರಂದು ರಘುಪತಿ ಭಟ್ ಪದ್ಮಪ್ರಿಯ ಅವರು ಕರಂಬಳ್ಳಿಯ ಮನೆಯಿಂದ ನಾಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅತುಲ್ ರಾವ್ ನಕಲಿ ವಿರುದ್ದ ಅನುಮಾನ ವ್ಯಕ್ತವಾಗಿತ್ತು. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಸಿಐಡಿಗೆ ವರ್ಗವಾಗಿತ್ತು.
ತನಿಖೆ ನಡೆಸಿದ ಸಿಓಡಿ ಅಧಿಕಾರಿಗಳು ಸಲ್ಲಿಸಿದ ದೋಷಾರೋಪ ಪಟ್ಟಿ ಹಿನ್ನೆಲೆ ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯವು 2023ರಲ್ಲಿ ಆರೋಪಿ ಅತುಲ್‌ಗೆ ಒಂದು ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅತುಲ್ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ಬಗ್ಗೆ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಹೆಗ್ಡೆ ಬುಧವಾರ ತೀರ್ಪು ಪ್ರಕಟಿಸಿದ್ದು, ಆರೋಪಿ ಅತುಲ್‌ನನ್ನು ದೋಷಮುಕ್ತಗೊಳಿಸಿದ್ದಾರೆ.

























































