ಬೆಂಗಳೂರು: ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಡಿಎಸ್ ನಾಯಕ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯನ್ನು ಅಪಹರಿಸಿದ ಆರೋಪ ಬಗ್ಗೆ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಕಳೆದ ವಾರ ಎಸ್‌ಐಟಿ ಪೊಲೀಸರು ಬಂಧಿಸಿದ್ದರು.
ನ್ಯಾಯಾಂಗ ಬಂಧನದಲ್ಲಿರುವ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆಗೆ ಬಂದಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮಹತ್ವದ ಆದೇಶ ಪ್ರಕಟಿಸಿದ್ದಾರೆ.
ರೇವಣ್ಣ ಪರವಾಗಿ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಅವರು ವಾದ ಮಂಡಿಸಿದರು. ರಾಜಕೀಯ ದುರುದ್ದೇಶದಿಂದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ದ ಆರೋಪ ಮಾಡಲಾಗಿದೆ. ಹಾಗಾಗಿ ಯಾವ ಪ್ರಕರಣ ದಾಖಲಾಗಿದೆಯೋ, ಯಾವ ಪ್ರಕರಣದಲ್ಲಿ ರೇವಣ್ಣ ಅವರನ್ನು ಬಂಧಿಸಲಾಗಿದೆಯೋ ಆ ಪ್ರಕರಣವನ್ನಷ್ಟೇ ಪರಿಗಣಿಸಬೇಕು. ಪ್ರಜ್ವಲ್ ರೇವಣ್ಣ ಅವರ ಕೃತ್ಯದಲ್ಲಿ ರೇವಣ್ಣ ಅವರನ್ನು ಸೇರಿಸಬೇಡಿ ಎಂದು ವಕೀಲ ಸಿ.ವಿ.ನಾಗೇಶ್ ವಾದಿಸಿದರು.
ಒತ್ತೆಯಿಟ್ಟು ಹಣ-ಒಡವೆಗಳನ್ನು ಲಪಟಾಯಿಸಿದರೆ ಅಪರಾಧ ಎನ್ನಬಹುದು ಆದರೆ ರೇವಣ್ಣ ಅವರು ಅಂತಹಾ ಅಪರಾಧ ಮಾಡಿಲ್ಲ, ಕೇವಲ ಕರೆಸಿಕೊಂಡು ವಶದಲ್ಲಿಟ್ಟುಕೊಂಡರೆ ಕಿಡ್ನಾಪ್ ಪ್ರಕರಣ ಎಂದು ಪರಿಗಣಿಸಲಾಗದು ಎಂದು ವಕೀಲರು ಹೆಚ್.ಡಿ.ರೇವಣ್ಣ ಅವರನ್ನು ಸಮರ್ಥಿಸಿದ್ದಾರೆ. ಈ ಕೇಸ್‌ನಲ್ಲಿ 364A ಸೆಕ್ಷನ್‌ಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿಗಳಿಲ್ಲ ಎಂದು ನ್ಯಾಯಾಲಯದ ಗಮನಸೆಳೆದರು.
ಆದರೆ, ವಿಶೇಷ ಅಭಿಯೋಜಕರು ಆರೋಪಿ ಪರ ವಕೀಲರ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೇವಣ್ಣ ಅವರು ಪ್ರಭಾವಿ ಕಟುಂಬದ ವ್ಯಕ್ತಿ. ಅವರು ಪ್ರಭಾವಿ ರಾಜಕಾರಣಿಯಾಗಿದ್ದಾರೆ ಎಂದು ನ್ಯಾಯಾಲಯದ ಗಮನಸೆಳೆದ ಸರ್ಕಾರಿ ವಕೀಲರು, ಒಂದು ವೇಳೆ ರೇವಣ್ಣ ಅವರು ಜಾಮೀನಲ್ಲಿ ಬಿಡುಗಡೆಯಾದರೆ ಇತರ ಸಂತ್ರಸ್ತ ಮಹಿಳೆಯರು ಹೇಳಿಕೆ ನೀಡಲು ಮುಂದೆ ಬರಲಾಗದು. ಬೇರೆ ಸಂತ್ರಸ್ತೆಯರಿಗೆ ಬೆದರಿಕೆ ಹಾಕುವ ಸಂಭವ ಇರುತ್ತದೆ ಎಂದು ವಾದಿಸಿ, ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡದಂತೆ ಮನವಿ ಮಾಡಿದರು.
ಈ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿ ಮೇಲಿನ ತೀರ್ಪನ್ನು 5 ಗಂಟೆಗೆ ಕಾಯ್ದಿರಿಸಿದರು. ಸಂಜೆ ಈ ಅರ್ಜಿಕುರಿತಂತೆ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು.