ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ದದ ಅಶ್ಲೀಲ ವೀಡಿಯೋ ಪ್ರಕರಣ ರಾಜಕಾರಣದಲ್ಲಿ ಸಂಘರ್ಷವನ್ನು ಹುಟ್ಟುಹಾಕಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರ ವಾಗ್ದಾಳಿ ಪ್ರತಿದಾಳಿ ತೀವ್ರಗೊಂಡಿದೆ. ಈ ನಡುವೆ, ಜೆಡಿಎಸ್ ನಾಯಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಂತ್ರಸ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ದೂರು ನೀಡಿರುವ ಬೆಳವಣಿಗೆ ಒಟ್ಟಾರೆ ಪ್ರಕರಣಕ್ಕೆ ಹೊಸ ತಿರುವನ್ನು ಕೊಟ್ಟಿದೆ.
ಎಚ್.ಡಿ.ಕುಮಾರಸ್ವಾಮಿ ಅವರು ಸಂತ್ರಸ್ತರಿಗೆ ಬೆದರಿಕೆ ಹಾಕುತ್ತಿದ್ದು, ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ವಿಶೇಷ ತನಿಖಾ ತಂಡಕ್ಕೆ ಗುರುವಾರ ದೂರು ಸಲ್ಲಿಸಿದ್ದಾರೆ.
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹಲವು ಮಹಿಳೆಯರು ಬಲಿಯಾಗಿದ್ದಾರೆ ಎಂದು ಈ ದೂರಿನಲ್ಲಿ ಆರೋಪಿಸಿರುವ ಕಾಂಗ್ರೆಸ್ ನಾಯಕರು, ಪ್ರಕರಣ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತಿರುವಾಗಲೇ ಕುಮಾರಸ್ವಾಮಿ ಅವರು ಸಂತ್ರಸ್ತರ ಸ್ಥಳವನ್ನು ಬಹಿರಂಗಪಡಿಸುತ್ತಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿರುವವನ್ನು ಪರೋಕ್ಷವಾಗಿ ರಕ್ಷಿಸುತ್ತಿದ್ದು, ಹೀಗಾಗಿ ಸಂತ್ರಸ್ತರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ದೂರಿನಲ್ಲಿ ಬೆಳಕು ಚೆಲ್ಲಿದ್ದಾರೆ. ಈ ಪ್ರಕರಣದಲ್ಲಿ ಕುಮಾರಸ್ವಾಮಿಯವರನ್ನೂ ವಿಚಾರಣೆಗೊಳಪಡಿಸಬೇಕೆಂದು ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ.
























































