ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದ್ದು, ಬೇಸಿಗೆಯ ಬಿರು ಬಿಸಿಲಿನಿಂದ ಬೆಂದಿದ್ದ ಜನರಲ್ಲಿ ಸಂತಸ ಕಂಡು ಬಂದಿದೆ. ಆದರೆ ಇದೇ ಮಳೆ ಕೆಲವೆಡೆ ಅವಾಂತರಕ್ಕೆ ಕಾರಣವಾಗಿದೆ.
ಬೆಂಗಳೂರು ಗ್ರಾಮಾಂತರ ಭಾಗ, ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆ ದಾರುಣ ಸಾವನ್ನಪ್ಪಿದ್ದಾರೆ. ಮಹಿಳೆ ಜೊತೆ ಇಪ್ಪತ್ತಕ್ಕೂ ಹೆಚ್ಚು ಮೇಕೆಗಳೂ ಸಿಡಿಲಿಗೆ ಬಲಿಯಾಗಿವೆ.
ಮೃತ ಮಹಿಳೆಯನ್ನು ಗಣಗಲು ಗ್ರಾಮದ ರತ್ಮಮ್ಮ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಧಿಡೀರ್ ಮಳೆಯಾದ ಸಂದರ್ಭದಲ್ಲಿ ತೋಟದ ಬಳಿ ಬೇವಿನ ಮರದಡಿ ಮೇಕೆಗಳ ಜೊತೆ ಮಹಿಳೆ ನಿಂತಿದ್ದಾಗ ಸಿಡಿಲು ಬಡಿದಿದೆ ಎನ್ನಲಾಗಿದೆ. ಮಹಿಳೆ ಹಾಗೂ ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.