ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಪಲಾಯನವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಈ ವಿಚಾರದಲ್ಲಿ ಆಡಳಿತ ಪ್ರತಿಪಕ್ಷಗಳ ನಡುವೆ ವಾಗ್ದಾಳಿ ನಡೆಯುತ್ತಿದ್ದು, ಪ್ರಜ್ವಲ್ ರೇವಣ್ಣ ಅವರು ರಾಜತಾಂತ್ರಿಕ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ಹಾರಿದ್ದಾರೆ. ಅವರ ಪಾಸ್ಪೋರ್ಟ್ ರದ್ದುಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತಂತೆ ಪ್ರಧಾನಿಯವರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಪ್ರಜ್ವಲ್ ರೇವಣ್ಣ ಅವರಿಗೆ ವೀಸಾ ನೀಡಿರುವುದೂ ಕೇಂದ್ರ ಸರ್ಕಾರ. ಇದೀಗ ಪ್ರಜ್ವಲ್ ಅವರನ್ನು ಕರೆತರುವ ಜವಾಬ್ಧಾರಿಯೂ ಕೇಂದ್ರ ಸರ್ಕಾರದ್ದು ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತಂತೆ ಬಿಜೆಪಿ ನಾಯಕರ ಹೆಸರುಗಳನ್ನು ಎಳೆದು ತರುತ್ತಿರುವ ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, ‘ಪ್ರಜ್ವಲ್ ರೇವಣ್ಣ ನಿಮ್ಮ ಎಂಪಿ’ ಎಂದು ಹಳೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಯತ್ತ ಬೊಟ್ಟು ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಜ್ವಲ್ ಪ್ರಕರಣ ಬಗ್ಗೆ ಕಾಂಗ್ರೆಸ್ ನಾಯಕರನ್ನು ತಮ್ಮದೇ ದಾಟಿಯಲ್ಲಿ ಆರ್.ಅಶೋಕ್ ತರಾಟೆಗೆ ತೆಗೆದುಕೊಂಡರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತಿಗೆ ಮೂರು ಕಾಸಿನ ಬೆಲೆ ಇಲ್ಲ. ಭಯೋತ್ಪಾದನಾ ಚಟುವಟಿಕೆಗೆ ಅವರು ಹೇಳಿದ ಮಾತೆಲ್ಲ ಸುಳ್ಳಾಯಿತು. ಅವರು ಗೃಹಸಚಿವ ಅಮಿತ್ ಶಾ ಬಗ್ಗೆ ಹೇಳಿದ ಮಾತಿಗೆ ಬೆಲೆ ಕೊಡಬೇಕಾಗಿಲ್ಲ. 28 ಸ್ಥಾನದಲ್ಲಿ ಕೆಲವು ಸ್ಥಾನಗಳನ್ನು ಜೆಡಿಎಸ್ಗೆ ಬಿಟ್ಟಿದ್ದು, ಅಲ್ಲಿ ಯಾರು ಸ್ಪರ್ಧಿಸಬೇಕೆಂದು ಜೆಡಿಎಸ್ ತೀರ್ಮಾನಿಸುತ್ತದೆ. ಪ್ರಜ್ವಲ್ ರೇವಣ್ಣ ನಮ್ಮ ಸಂಸದರಲ್ಲ. ಇವರೇ ಜೋಡೆತ್ತು ಎಂದು ಅವರ ಜೊತೆಗೆ ಇದ್ದು ಮೊದಲಿಗೆ ಗೆಲ್ಲಿಸಿದ್ದರು. ಇದಕ್ಕೆ ಕಾಂಗ್ರೆಸ್ಸೇ ಉತ್ತರ ನೀಡಬೇಕು. ಪ್ರಜ್ವಲ್ ವಿದೇಶಕ್ಕೆ ಹೋಗುವಾಗ ಕರ್ನಾಟಕ ಪೊಲೀಸರು ಏನು ಮಾಡುತ್ತಿದ್ದರು? ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು? ಕಾಂಗ್ರೆಸ್ ಸರ್ಕಾರ ಗುಪ್ತಚರ ದಳ ವಿಫಲವಾಗಿದೆ ಎಂದು ಒಪ್ಪಿಕೊಳ್ಳಲಿ ಎಂದರು.