ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ವಿಚಾರದಲ್ಲಿ ಆಡಳಿತ-ಪ್ರತಿಪಕ್ಷಗಳ ನಾಯಕರ ನಡುವೆ ವಾಕ್ಸಮರ ಮುಂದುವರಿದಿದೆ. ಇದೇ ವೇಳೆ ಎದುರಾಳಿ ಪ್ರಕ್ಷಗಳ ನಾಯಕರ ಹೇಳಿಕೆಗಳಿಗೆ ರಾಜ್ಯ ಸರ್ಕಾರದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವಂತಹದ್ದು ಏನೂ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.
ಯಾರನ್ನೇ ಆದರೂ ಏಕಾಏಕಿ ಬಂಧಿಸಲಾಗುವುದಿಲ್ಲ. ಪುರಾವೆಗಳು, ದೂರಿನಲ್ಲಿ ಏನು ಹೇಳಿರುತ್ತಾರೆ ಎಂಬುದೆಲ್ಲ ಪರಿಶೀಲಿಸಬೇಕಾಗುತ್ತದೆ. ಪ್ರಕರಣವನ್ನು ಯಾವ ಸೆಕ್ಷನ್ ಅಡಿಯಲ್ಲಿ ದಾಖಲಿಸಲಾಗಿದೆ, ಬಂಧಿಸಲು ಅವಕಾಶ ಇದೆಯೇ? ಜಾಮೀನು ಪಡೆಯುವಂಥ ಪ್ರಕರಣವೇ? ಎಂಬಿತ್ಯಾದಿ ಸಂಗತಿಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಾರೆ ಎಂದು ಅವರು ತಿಳಿಸಿದರು. ಈ ಅಂಶಗಳನ್ನೆಲ್ಲ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.
ಆ ತನಿಖಾಧಿಕಾರಿಗಳು ಆರೋಪಿಗಳಿಗೆ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗದಿದ್ದರೆ ಎಸ್ಐಟಿ ತಂಡ ಮುಂದಿನ ಪ್ರಕ್ರಿಯೆ ಮಾಡಲಿದೆ ಎಂದು ಪರಮೇಶ್ವರ್ ತಿಳಿಸಿದರು.