ವಿಜಯಪುರ: ಲೋಕಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನ ನಡೆಯುತ್ತಿದೆ. ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹುರಿಯಾಳುಬಪ್ರೊ.ರಾಜು ಅಲಗೂರು ಅವರು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಕೈ ಪಕ್ಷದ ಶಕ್ತಿಪ್ರದರ್ಶನ ನಡೆಯಿತು.
ಸೋಮವಾರ ಪ್ರೊ.ರಾಜು ಅಲಗೂರು ಅವರು ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸಾವಿರಾರು ಬೆಂಬಲಿಗರು ಈ ಮೆರವಣಿಗೆಯಲ್ಲಿ ಭಾಗಿಯಾದರು.
ಸಿದ್ದೇಶ್ವರ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ಅಭ್ಯರ್ಥಿ ತೆರಳಿದ ಸಂದರ್ಭದಲ್ಲಿ ಅವರನ್ನು ಹಿಂಬಾಲಿಸಿದ ಕಾಂಗ್ರೆಸ್ ಕಾರ್ಯಕರ್ತರ, ಬೆಂಬಲಿಗರ ಮೆರವಣಿಗೆ ಸಾಗಿದಾಗ ಪ್ರವಾಹ ಹರಿದಂತೆ ಭಾಸವಾಯಿತು. ಸಚಿವರು, ಶಾಸಕರು, ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡು, ಒಗ್ಗಟ್ಟು ಪ್ರದರ್ಶಿಸಿಸಿದರು.

































































