ಮಂಗಳೂರು: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್-ಬಿಜೆಪಿ ಕಾದಾಟದಲ್ಲಿ ತೊಡಗಿದರೆ, ಪಕ್ಷೇತರರೂ ಅದೃಷ್ಟಪರೀಕ್ಷೆಗಿಳಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆಯಾಗಿದೆ. ಈ ನಡುವೆ, ಒಬ್ಬ ಅಭ್ಯರ್ಥಿ ಎರಡು ಪಕ್ಷಗಳ ಹುರಿಯಾಳಾಗಿ ನಾಮಪತ್ರ ಸಲ್ಲಿಸಿರುವ ಅಚ್ಚರಿಯ ವಿದ್ಯಮಾನಕ್ಕೂ ಕರಾವಳಿಯ ಈ ಕ್ಷೇತ್ರ ಸಾಕ್ಷಿಯಾಗಿದೆ.
ಕ್ಯಾ. ಬೃಜೇಶ್ ಚೌಟ (ಬಿಜೆಪಿ), ಆರ್.ಪದ್ಮರಾಜ್ (ಕಾಂಗ್ರೆಸ್), ರಂಜಿನಿ (ಕೆಆರ್ಎಸ್), ಕಾಂತಪ್ಪ (ಬಿಎಸ್ಪಿ), ಕೆ.ಇ.ಮನೋಹರ (ಉತ್ತಮ ಪ್ರಜಾಕೀಯ ಪಾರ್ಟಿ), ದುರ್ಗಾಪ್ರಸಾದ್ (ಕರುನಾಡು ಸೇವಕರ ಪಾರ್ಟಿ), ದೀಪಕ್ ರಾಜೇಶ್ ಕುವೆಲ್ಲೋ (ಪಕ್ಷೇತರ), ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ (ಪಕ್ಷೇತರ), ಸತೀಶ್ ಬಿ. (ಪಕ್ಷೇತರ), ಮ್ಯಾಕ್ಷಿಂ ಪಿಂಟೋ (ಪಕ್ಷೇತರ) ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಇದೇ ಕ್ಷೇತ್ರದಲ್ಲಿ ಸುಪ್ರೀತ್ ಕುಮಾರ್ ಪೂಜಾರಿ ಎಂಬವರು ಎರಡು ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಜನಹಿತ ಪಕ್ಷ ಮತ್ತು ಜೆಡಿಯು ಪಕ್ಷದಿಂದ ನಾಮಪತ್ರ ಸಲ್ಲಿಸಿರುವ ಸುಪ್ರೀತ್ ಕುಮಾರ್ ಪೂಜಾರಿ ಅಂತಿಮವಾಗಿ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.


























































