ಬೆಂಗಳೂರು: ನಮ್ಮ ಮಕ್ಕಳ ದಾರಿ ತಪ್ಪಿಸುವವರ ವಿರುದ್ದ ಮಾತನಾಡಿದೆ. ಚಿಕ್ಕಪ್ಪ, ಅಣ್ಣ, ಹಿತಚಿಂತಕನಾಗಿ ಉತ್ತರಕರ್ನಾಟಕ ಭಾಷೆಯಲ್ಲಿ ಮಾತನಾಡಿದ್ದು ತಪ್ಪೇ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.
ಮೋದಿ ಹೆಸರು ಬಳಸಿ ಅವಹೇಳನ ಮಾಡಿದ್ದಾರೆ ಎಂಬ ಆರೋಪ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಿವರಾಜ ತಂಗಡಗಿ, ಬಿಜೆಪಿಯವರು ಸುಳ್ಳು, ಕಪಟ, ಮೋಸ ಮಾಡುವುದರ ಜೊತೆಗೆ ನಮ್ಮ ಯುವಕರ, ಮಕ್ಕಳ ಹಾದಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ನಾನು ಕಾರಟಗಿಯಲ್ಲಿ ಹೇಳಿದ ಹೇಳಿಕೆಗೆ ಬದ್ದನಾಗಿದ್ದೇನೆ. ಮಾಧ್ಯಮದವರು ನನ್ನ ಭಾಷಣದ ಪೂರ್ಣಪಾಠವನ್ನು ಹಾಕಿ, ಕೇವಲ ತುಣುಕನ್ನು ಮಾತ್ರ ಏಕೆ ಹಾಕಿದ್ದೀರಿ? ಎಂದು ಪ್ರಶ್ನಿಸಿದರು.
ಬಿಜೆಪಿಯವರು 2014 ರ ಲೋಕಾಸಭಾ ಚುನಾವಣೆ ವೇಳೆ ಮಾಡಿದ ಭಾಷಣಗಳನ್ನು ಅವರೇ ಕೇಳಲಿ. ಅವರ ಭಾಷಣ ಕೇಳಿ ಅವರೇ ಬಿಜೆಪಿಗೆ ಮತ ನೀಡುವುದಿಲ್ಲ. 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು, ಎರಡು ಕೋಟಿ ಉದ್ಯೋಗ ನೀಡಲಾಗಿದೆಯೇ? 10 ವರ್ಷದಲ್ಲಿ ಒಂದೇ ಒಂದು ಉದ್ಯೋಗ ನೀಡಿಲ್ಲ. ಸ್ಮಾರ್ಟ್ ಸಿಟಿ ಎಷ್ಟು ಅಭಿವೃದ್ದಿ ಮಾಡಿದ್ದಾರೆ ಉತ್ತರಿಸಲಿ ಎಂದ ಅವರು, ನರೇಗಾ ಯೋಜನೆಯ ಅಡಿ ಬರ ಪರಿಸ್ಥಿತಿ ವೇಳೆ 140 ಮಾನವ ದಿನ ಉದ್ಯೋಗ ನೀಡಿ ಎಂದರೂ ನೀಡುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಈ ಹಿಂದೆ ನೆರೆ ಬಂದು ಮನೆ, ಬೆಳೆ ಸೇರಿದಂತೆ ಎಲ್ಲಾ ಹಾಳಾಯಿತು. ಆಗ ಮೋದಿಯವರು ಬರಲೇ ಇಲ್ಲ. ಈಗ ಚುನಾವಣೆ ಹೊತ್ತಲ್ಲಿ ಬಂದರೆ ಏನು ಪ್ರಯೋಜನ? ಎಷ್ಟು ರೈತರ ಸಾಲ ಮನ್ನಾ ಮಾಡಿದ್ದಾರೆ. ಎಷ್ಟು ಅಣೆಕಟ್ಟು ಕಟ್ಟಿದ್ದಾರೆ. ಅಭಿವೃದ್ದಿ ವಿಚಾರ ಬೇಡ ಎಂದರೆ ಎಷ್ಟು ಕಂಪೆನಿಗಳನ್ನು ಮಾರಿದ್ದಾರೆ, ಈ ಬಗ್ಗೆಯಾದರೂ ಮಾಹಿತಿ ನೀಡಲಿ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದೆ ಮೋಸ ಮಾಡಿದ್ದರಲ್ಲಾ ಇದರ ಬಗ್ಗೆ ಮಾತನಾಡಲಿ ಎಂದರು.
ನಮ್ಮ ಪಾಲಿನ ಹಣ ಕೇಳಿದರೆ ಆರೋಪ ಮಾಡುತ್ತಾರೆ. ಬರ ಪರಿಹಾರ ನೀಡುತ್ತಿಲ್ಲ. ಬರ ಅಧ್ಯಯನ ತಂಡಗಳು ಬಂದು ಹೋದರು ಹಣ ನೀಡುತ್ತಿಲ್ಲ. ಸಿದ್ದರಾಮಯ್ಯ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಬಿಜೆಪಿಯವರು ನೂರಾರು ಬಾರಿ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ದೂರಿದ ಶಿವರಾಜ್ ತಂಗಡಗಿ, ಬಿಜೆಪಿ ಪಕ್ಷದ ಅನುರಾಗ್ ಠಾಕೂರ್ ಹೇಳುತ್ತಾರೆ ʼಮೋದಿ ವಿರುದ್ದ ಮಾತನಾಡಿದವರಿಗೆ ಗುಂಡಿಕ್ಕಿ ಕೊಲ್ಲಿʼ ಎಂದು ಜವಾಬ್ದಾರಿಯುತ ಸಚಿವರ ಮಾತೇ ಅದು. ಅವರನ್ನು ವಜಾ ಮಾಡುವ ಶಕ್ತಿ ನಿಮ್ಮ ಬಳಿ ಇಲ್ಲವೇ? ಪ್ರಜ್ಞಾಸಿಂಗ್ ಠಾಕೂರ್ ಶಿವಮೊಗ್ಗಕ್ಕೆ ಬಂದಾಗ “ನಿಮ್ಮ ಮನೆಯ ಚಾಕೂ ಚೂರಿ, ಬಂದೂಕು ತಯಾರು ಮಾಡಿಟ್ಟುಕೊಳ್ಳಿʼ ಎಂದಿದ್ದರು. ನಿಮ್ಮದು ಸಂಸ್ಕೃತಿಯ ಮಾತೆ? ಎಂದು ಪ್ರಶ್ನಿಸಿದರು.