ಬೆಂಗಳೂರು: ಕಾಂಗ್ರೆಸ್ ನಾಯಕರಿಗೆ ಬರ ಪರಿಹಾರ ತರಲು ಯೋಗ್ಯತೆ ಇಲ್ಲವಾದರೆ ರಾಜೀನಾಮೆ ಕೊಟ್ಟು ಹೋಗಲಿ. ನಾವು ಸರ್ಕಾರ ನಡೆಸುವಾಗ ಕೇಂದ್ರದ ಕಡೆ ನೋಡದೆ ರೈತರಿಗೆ ಪರಿಹಾರ ನೀಡಲಾಗಿತ್ತು. ಈಗಿನ ಸರ್ಕಾರ ಪಾಪರ್ ಆಗಿದ್ದು, ಕುಡಿಯುವ ನೀರಿಗೂ ಹಣವಿಲ್ಲ. ಕುಡಿಯುವ ನೀರು ಕೊಡುವ ಯೋಗ್ಯತೆ ಇಲ್ಲವಾದರೆ ಕುರ್ಚಿ ಬಿಟ್ಟು ತೊಲಗಲಿ ಎಂದು ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಹಾರಕ್ಕೆ ಚುನಾವಣಾ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಎಸ್‌ಡಿಆರ್‌ಎಫ್ ಹಣ ಈಗಾಗಲೇ ರಾಜ್ಯ ಸರ್ಕಾರಕ್ಕೆ ತಲುಪಿದೆ. ಎನ್‌ಡಿಆರ್‌ಎಫ್ ಹಣವನ್ನು ಕೇಂದ್ರ ಸರ್ಕಾರ ಒಟ್ಟಿಗೆ ತೀರ್ಮಾನ ಮಾಡಿ ಎಲ್ಲ ರಾಜ್ಯಗಳಿಗೆ ನೀಡುತ್ತದೆ. ಬಿಜೆಪಿ ಸರ್ಕಾರ ತಕ್ಷಣ ಪ್ರವಾಹ ಹಾನಿ ಪರಿಹಾರ ನೀಡಿದ್ದು, ಬಳಿಕ ಕೇಂದ್ರ ಸರ್ಕಾರ ಹಣ ನೀಡಿತ್ತು. ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಇದೇ ರೀತಿ ತಡವಾಗಿ ಪರಿಹಾರ ನೀಡಲಾಗಿತ್ತು. ಆಗ ಬಾಯಿ ಬಡಿದುಕೊಳ್ಳದ ಕಾಂಗ್ರೆಸ್, ಈಗ ಮಾತ್ರ ಬಾಯಿ ಬಡಿಯುತ್ತಿದೆ. ಕೇಂದ್ರದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳದೆ ರಾಜಕೀಯ ಮಾಡುತ್ತಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಪ್ರಧಾನಿಯ ಬಗ್ಗೆ ಉತ್ತಮವಾಗಿ ಮಾತನಾಡಿದ್ದಾರೆ. ಕರ್ನಾಟಕದ ಕಾಂಗ್ರೆಸ್ ನಾಯಕರು ಅವರ ಬಳಿ ಟ್ಯೂಶನ್ ಪಡೆಯಲಿ ಎಂದರು.
ಲೋಕಸಭಾ ಚುನಾವಣೆಯಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಬಿಜೆಪಿ ಕಾರ್ಯಕರ್ತರು ಭಿನ್ನಾಭಿಪ್ರಾಯವಿಲ್ಲದೆ ನಿಷ್ಠೆಯಿಂದ ಕೆಲಸ ಮಾಡುವ ಮನೋಭಾವ ಹೊಂದಿದ್ದಾರೆ. ಪಕ್ಷ ಅಂತಿಮವಾಗಿ ಸೂಚಿಸುವ ಅಭ್ಯರ್ಥಿಗಳ ಪರವಾಗಿ ಎಲ್ಲರೂ ಕೆಲಸ ಮಾಡಲಿದ್ದಾರೆ. ಒಂದು ಬಾರಿ ಟಿಕೆಟ್ ಘೋಷಣೆಯಾದ ಬಳಿಕ ಎಲ್ಲರೂ ಒಂದಾಗಿ ಕೆಲಸ ಮಾಡಲಿದ್ದಾರೆ ಎಂದರು.
























































