ತ್ರಿಶೂರ್: ಕೇರಳದಲ್ಲಿ ಕಾಡುಪ್ರಾಣಿಗಳ ದಾಳಿಗೆ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದು, ಎರ್ನಾಕುಲಂ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಕಾಡಾನೆ ಸಾಯಿಸಿದೆ.
ಕೋಝಿಕ್ಕೋಡ್‌ನ ಕಕ್ಕಯಂನಲ್ಲಿ ಸೋಮವಾರ ಮಧ್ಯಾಹ್ನ 70 ವರ್ಷದ ಅಬ್ರಹಾಂ ಅವರು ಕಾಡಾನೆ ದಾಳಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಸಂಜೆ ಅವರು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇನ್ನೊಂದೆಡೆ, ತ್ರಿಶೂರ್ ಬಳಿ 64 ವರ್ಷ ವಯಸ್ಸಿನ ವಲ್ಸಲಾ ಎಂಬವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಅರಣ್ಯ ಪ್ರದೇಶದ ಬಳಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುತ್ತಿದ್ದಾಗ ಮಹಿಳೆ ಮೇಲೆ ಆನೆ ದಾಳಿ ಮಾಡಿದೆ ಎನ್ನಲಾಗಿದೆ.
ಈ ನಡುವೆ, ವಯನಾಡ್, ಇಡುಕ್ಕಿ, ಎರ್ನಾಕುಲಂ, ಮತ್ತು ತ್ರಿಶೂರ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾಡಾನೆ ದಾಳಿಯ ಪ್ರಕರಣಗಳು ವರದಿಯಾಗುತ್ತಿದ್ದು, ಕೇರಳದಲ್ಲಿ ಕಳೆದ ಐದು ವಾರಗಳಲ್ಲಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ ೭ಕ್ಕೆ ಏರಿಕೆಯಾಗಿದೆ.