ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ KSRTC ಮಾದರಿಯಲ್ಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನೌಕರರಿಗೂ ವಿಮಾ ಸೌಲಭ್ಯ ಜಾರಿಗೆ ಬಂದಿದೆ. ಕೆಎಸ್ಸಾರ್ಟಿಸಿ ಮಾದರಿಯಲ್ಲೇ ಬಿಎಂಟಿಸಿ ನೌಕರರಿಗೂ ಈ ಸೌಲಭ ಒದಗಿಸುವುದಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಭರವಸೆ ನೀಡಿದ್ದರು. ಇದೀಗ ಸರ್ಕಾರದ ಅನುಮೋದನೆ ನಂತರ BMTCಯಲ್ಲೂ ಈ ಸೌಲಭ್ಯ ಜಾರಿಗೆ ಬಂದಿದೆ.
ಬೆಂ.ಮ.ಸಾ.ಸಂಸ್ಥೆ (BMTC)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಅವಲಂಬಿತರಿಗೆ ಆರ್ಥಿಕ ಭದ್ರತೆ ಒದಗಿಸುವ ಹಿತದೃಷ್ಟಿಯಿಂದ 1 ಕೋಟಿ ರೂಪಾಯಿ ವಿಮಾ ಸೌಲಭ್ಯವನ್ನು ಪ್ರಕಟಿಸಲಾಗಿದ್ದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಮೃತ ಸಿಬ್ಬಂದಿಗಳ ಅವಲಂಬಿತ ಕುಟುಂಬದವರಿಗೆ ಅನುಕೂಲವಾಗುವಂತೆ ಇಲಾಖಾ ಗುಂಪು ವಿಮಾ ಪರಿಹಾರ 3 ಲಕ್ಷ ರೂಪಾಯಿ ವಿಮಾ ಪರಿಹಾರವನ್ನು 2008ನೇ ಸಾಲಿನಿಂದ ಜಾರಿಗೆ ತರಲಾಗಿದ್ದು, ಪ್ರಸ್ತುತ ಈ ಯೋಜನೆಯು ಜಾರಿಯಲ್ಲಿರುತ್ತದೆ. ದೇಶದ ರಸ್ತೆ ಸಾರಿಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೆನರಾ ಬ್ಯಾಂಕ್‌ನಲ್ಲಿ ವೇತನ ಖಾತೆ ಹೊಂದಿದ್ದು, ರಸ್ತೆ ಅಪಘಾತದಿಂದ ಮರಣ ಹೊಂದಿದ ಸಿಬ್ಬಂದಿಯ ಕುಟುಂಬದವರಿಗೆ 30 ಲಕ್ಷ ರೂ ವಿಮಾ ಪರಿಹಾರವನ್ನು ಪಾವತಿಸಲು 10.08.2022ರಂದು ಕೆನರಾ ಬ್ಯಾಂಕ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಒಟ್ಟು 6 ಮೃತ ಸಿಬ್ಬಂದಿಯ ಅವಲಂಬಿತ ಕುಟುಂಬದವರಿಗೆ 30 ಲಕ್ಷ ರೂ.ಗಳಂತೆ ವಿಮಾ ಪರಿಹಾರ ಮೊತ್ತವನ್ನು ಈಗಾಗಲೇ ನೀಡಲಾಗಿದೆ.
ಈ ವಿಮಾ ಪರಿಹಾರವನ್ನು ಹೆಚ್ಚಿಸುವ ಸಲುವಾಗಿ ಸಂಸ್ಥೆಯು ವಿವಿಧ ಬ್ಯಾಂಕ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಬ್ಯಾಂಕ್‌ಗಳಲ್ಲಿ ವೇತನ ಖಾತೆ ಹೊಂದಿರುವ ನೌಕರರು ಅಪಘಾತದಿಂದ (ಕರ್ತವ್ಯನಿರತ ಮತ್ತು ಖಾಸಗಿ ಅಪಘಾತ ಸೇರಿದಂತೆ) ಮೃತಪಟ್ಟಲ್ಲಿ ಮೃತರ ಅವಲಂಬಿತರಿಗೆ ವೇತನ ಖಾತೆಯ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ ಎಂದು ಸಚಿವ ರಾಮಲಿಂಗ ರೆಡ್ಡಿ ಮಾಹಿತಿ ನೀಡಿದ್ದಾರೆ.
ಈ ಬ್ಯಾಂಕ್‌ಗಳಲ್ಲಿ ವೇತನ ಖಾತೆ ಇರಬೇಕು;
-
ಯೂನಿಯನ್ ಬ್ಯಾಂಕ್ – ರೂ.65 ಲಕ್ಷ.
-
ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (SBI) – ರೂ.50 ಲಕ್ಷ.
-
ಕೆನರಾ ಬ್ಯಾಂಕ್ – ರೂ.50 ಲಕ್ಷ..
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (65 ಲಕ್ಷ ರೂ.) ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಲ್ಲಿ ಯೂನಿಯನ್ ಬ್ಯಾಂಕ್ನಲ್ಲಿ ವೇತನ ಖಾತೆ ಹೊಂದಿ ನೌಕರನ ಕುಟುಂಬಕ್ಕೆ 65 ಲಕ್ಷ ರೂ ವಿಮಾ ಪರಿಹಾರವನ್ನು ಪಾವತಿಸಲಾಗಿವುದು. ಮಾರಣಾಂತಿಕ ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮರಣ ಹೊಂದಿದ ಸಿಬ್ಬಂದಿಯ ಅವಲಂಬಿತ ಕುಟುಂಬದವರಿಗೆ ಅಂದರೆ, ಕ್ಯಾನ್ಸರ್, ಪಾರ್ಶ್ವವಾಯು, ಹೃದಯಘಾತ, ಕಿಡ್ನಿ ವೈಫಲ್ಯ ಸೇರಿದಂತೆ ಇತರೆ ಕಾಯಿಲೆಗಳಿಂದ ತಮ್ಮ ಸೇವಾವಧಿಯಲ್ಲಿ ಮರಣ ಹೊಂದುವ ಸಿಬ್ಬಂದಿಯ ಅವಲಂಬಿತ ಕುಟುಂಬದವರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಸಂಸ್ಥೆಯಿಂದ ಅವರ ಕಷ್ಟಕ್ಕೆ ನೆರವಾಗಲು ಪ್ರಸ್ತುತ ನೀಡುತ್ತಿದ್ದ 3 ಲಕ್ಷ ರೂ.ಗಳ ಇಲಾಖಾ ಗುಂಪು ವಿಮಾ ಮೊತ್ತವನ್ನು10 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಮೃತರ ಅವಲಂಬಿತ ಕುಟುಂಬದವರಿಗೆ 7 ಲಕ್ಷ ರೂ.ಗಳ ಹೆಚ್ಚುವರಿ ವಿಮಾ ಪರಿಹಾರ ಮೊತ್ತ ಲಭ್ಯವಾಗುತ್ತದೆ. ಸದರಿ ಯೋಜನೆಗೆ ಸಿಬ್ಬಂದಿಯ ಮಾಸಿಕ ವಂತಿಕೆ ಪ್ರಸ್ತುತ 70 ರೂ ಕಡಿತವಾಗುತ್ತಿದ್ದು, ಅದನ್ನು 350 ರೂ.ಗಳಿಗೆ ಹೆಚ್ಚಿಸಿ ಹಾಗೂ ಸಂಸ್ಥೆಯ ವತಿಯಿಂದ ಪ್ರತಿ ಸಿಬ್ಬಂದಿ ಪರವಾಗಿ 150 ರೂ ವಂತಿಗೆಯನ್ನು ಸೇರಿಸಿ ಒಟ್ಟು 500 ರೂಪಾಯಿ ಗುಂಪು ವಿಮಾ ವಂತಿಗೆಯನ್ನು ಪೇರಿಸಲಾಗುತ್ತದೆ. ಈ ವಂತಿಗೆಯಿಂದ ಅಪಘಾತ (ಕರ್ತವ್ಯನಿರತ/ಖಾಸಗಿ ಅಪಘಾತ ಸೇರಿದಂತೆ) ದಿಂದ ಮೃತಪಟ್ಟ ಸಿಬ್ಬಂದಿಯ ಅವಲಂಬಿತರಿಗೆ ಸಂಸ್ಥೆಯ ವತಿಯಿಂದ 50 ಲಕ್ಷ ರೂಪಾಯಿ ವಿಮಾ ಪರಿಹಾರವನ್ನು ಪಾವತಿಸಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.
ಈ ಮೂರು ಬ್ಯಾಂಕ್‌ಗಳಲ್ಲಿ ವೇತನ ಖಾತೆ ಹೊಂದಿರುವ ಸಿಬ್ಬಂದಿಯು ಅಪಘಾತ (ಕರ್ತವ್ಯನಿರತ/ಖಾಸಗಿ ಅಪಘಾತ ಸೇರಿದಂತೆ) ದಿಂದ ಮೃತಪಟ್ಟಲ್ಲಿ, ಅವರ ಅವಲಂಬಿತ ಕುಟುಂಬದವರಿಗೆ ಬ್ಯಾಂಕ್ ವತಿಯಿಂದ ರೂ.50 ಲಕ್ಷ ಮತ್ತು ಸಂಸ್ಥೆ ವತಿಯಿಂದ ರೂ.50 ಲಕ್ಷ ಹೀಗೆ ಒಟ್ಟು ರೂ.1 ಕೋಟಿ ವಿಮಾ ಪರಿಹಾರ ಮೊತ್ತ ಪಡೆಯಲು ಅರ್ಹರಿರುತ್ತಾರೆ.ಎಂದವರು ತಿಳಿಸಿದ್ದಾರೆ.
ಈ ನಡುವೆ, ಈ ಯೋಜನೆಯು 19.02.2024 ರಿಂದಲೇ ಜಾರಿಗೆ ಬರಲಿದ್ದು, ಮರಣ ಪ್ರಕರಣಗಳಿಗೆ ಮತ್ತು ಅಪಘಾತ ಪ್ರಕರಣಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ. ಈ ಗಾಗಲೇ ಇದ್ದ 50 ಲಕ್ಷ ವೇತನ ಖಾತೆಯ ಮತ್ತು 3 ಲಕ್ಷ ಗುಂಪು ವಿಮಾ ಪರಿಹಾರ ಮೊತ್ತವನ್ನು ಒಟ್ಟು 1 ಕೋಟಿ 15 ಲಕ್ಷದವರೆಗ ಹೆಚ್ಚಿಸಿ, BMTC ವ್ಯವಸ್ಥಾಪಕ ನಿರ್ದೇಶಕರಾದ ರಾಚಂದ್ರನ್.ಆರ್ ಅವರು ಆದೇಶ ಹೊರಡಿಸಿದ್ದಾರೆ