ಚಾಮರಾಜನಗರ: ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯಿಂದ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡುವ ಮೂಲಕ ಪ್ರಸ್ತುತ ಸಮಾಜದಿಂದ ಅದನ್ನು ತೊಡೆದು ಹಾಕಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಉಪ ತಹಸೀಲ್ದಾರ್ ನಾಗೇಂದ್ರ ಪ್ರತಿಪಾದಿಸಿದ್ದಾರೆ.
ಹನೂರು ಪಟ್ಟಣದ ಆರ್. ಎಸ್. ದೊಡ್ಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ವಸತಿ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ಈಗಲೂ ಜಾರಿಯಲ್ಲಿದೆ. ದಿನನಿತ್ಯ ಅಲ್ಲಲ್ಲಿ ಬಾಲ್ಯವಿವಾಹ ಪ್ರಕರಣಗಳು ಮಾದ್ಯಮಗಳಲ್ಲಿ ವರದಿಯಾಗುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಈ ಅನಿಷ್ಠ ಪದ್ದತಿಯಿಂದ ರಕ್ಷಣೆ ಮಾಡಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಸಿಸ್ಟರ್ ಆನಿಸ್ ಹಾಗೂ ಸುರೇಶ್ ಇವರುಗಳು ಪೋಕ್ಸೋ ಹಾಗೂ ಬಾಲ್ಯವಿವಾಹ ಕಾಯ್ದೆ ಕುರಿತು ವಿಷಯ ಮಂಡಿಸಿದರು. ಜಿಲ್ಲಾ ಮಕ್ಕಳ ರಕ್ಷಣ ಘಟಕದ ಸಿದ್ದಶೆಟ್ಟಿ ಸಹ ಮಾತನಾಡಿದರು.
ರಾಮಾಪುರದ ಇಂದಿರಾಗಾಂಧಿ ಶಾಲೆಯಲ್ಲೂ ಸಹ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಹನೂರು ಪೊಲೀಸ್ ಠಾಣೆಯ ಎ ಎಸ್ ಐ ಶಿವಕುಮಾರ್, ಜಿಲ್ಲಾ ಮಕ್ಕಳ ಸಹಾಯವಾಣಿ ಮಹೇಶ್, ಮೊರಾರ್ಜಿ ಶಾಲೆಯ ಪ್ರಾoಶುಪಾಲ ಪ್ರಕಾಶ್, ಆರ್ ಐ ಶಿವಕುಮಾರ್, ಗ್ರಾಮ ಲೆಕ್ಕಿಗ ಶೇಷಣ್ಣ ಸೇರಿದಂತೆ ರಾಮಪುರ ಇಂದಿರಾಗಾಂಧಿ ಶಾಲೆಯ ಪ್ರಾoಶು ಪಾಲರಾದ ಲಾಲು ನಾಯಕ್, ಪೊಲೀಸ್ ಸಿಬ್ಬಂದಿ ಶೋಭಾ, ಆರೋಗ್ಯ ಇಲಾಖೆಯ ಶ್ರುತಿ ಹಾಗು ಶಿಕ್ಷಕರು ಮಕ್ಕಳು ಸಿಬ್ಬಂದಿ ಉಪಸ್ಥಿತರಿದ್ದರು.