ಬೆಂಗಳೂರು; ಕೇಂದ್ರ ಸರ್ಕಾರದ ಈ ಮಧ್ಯಂತರ ಬಜೆಟ್ ಬಡವರು, ಯುವಕರು, ಮಹಿಳೆಯರು ಹಾಗೂ ರೈತರು ಈ ನಾಲ್ಕು ವರ್ಗಗಳು ದೇಶದ ಆಧಾರ ಸ್ಥಂಭಗಳು ಎಂಬ ಪರಿಕಲ್ಪನೆಯೊಂದಿಗೆ ರೂಪಿಸಲಾಗಿದೆ. ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಈ ಬಜೆಟ್ ವೇದಿಕೆ ಕಲ್ಪಿಸಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಗಕ ಆರ್.ಅಶೋಕ್ ಬಣ್ಣಿಸಿದ್ದಾರೆ.
ಮಧ್ಯಂತರ ಬಜೆಟ್ ಮಂಡನೆ ನಂತರ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, “ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಉತ್ತಮವಾಗಿದೆ. ಭಾರತದ ತಂತ್ರಜ್ಞಾನ ಹಾಗೂ ಆರ್ಥಿಕತೆಯ ಏಳ್ಗೆಗೆ ಇದು ಸಹಕಾರಿಯಾಗಿದೆ. ಪ್ರಧಾನಿ ಮೋದಿ ಅವರ ಆಶಯದಂತೆ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಹಾಗೂ 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಪೂರಕ ಬಜೆಟ್ ಮಂಡನೆಯಾಗಿದೆ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು ನಾಲ್ಕು ವಿಶೇಷ ರೈಲ್ವೆ ಕಾರಿಡಾರ್, ಏರ್ಪೋರ್ಟ್ ಆಧುನೀಕರಣ, ಸಣ್ಣ ನಗರಗಳಿಗೆ ಮೆಟ್ರೋ ಸೇವೆ, 40,000 ರೈಲು ಬೋಗಿಗಳ ಆಧುನೀಕರಣ, ಹೊಸ ವಂದೇ ಭಾರತ್, ನಮೋ ಭಾರತ್ ರೈಲುಗಳು ಸೇರಿದಂತೆ ಅನೇಕ ದೂರದೃಷ್ಟಿಯುಳ್ಳ ಯೋಜನೆಗಳನ್ನು ರೂಪಿಸಲಾಗಿದೆ. ಪ್ರವಾಸೋದ್ಯಮದಲ್ಲಿ ಪ್ರಪಂಚದ ಗಮನ ಸೆಳೆಯಲು ಒತ್ತು ನೀಡಲಾಗಿದೆ. ಚುನಾವಣೆಗಾಗಿ ಗಿಮಿಕ್ ಪಾಲಿಟಿಕ್ಸ್ ಮಾಡದೆ, ಮುಂದಿನ ಪೀಳಿಗೆಗೆ ಉಪಯುಕ್ತ ಆಗುವಂತ ಬಜೆಟ್ ಮಂಡನೆಯಾಗಿದೆ ಎಂದು ಹೇಳಿದರು.
ಮುಂದೆ ಸಿಎಂ ಸಿದ್ದರಾಮಯ್ಯ ಬಜೆಟ್ ಬರುತ್ತದೆ. ಗಂಡನದ್ದು ಕಿತ್ತು, ಹೆಂಡತಿಗೆ ಕೊಡ್ತಾರೆ. ಬಿಯರ್ ಬೆಲೆ 15 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಗಂಡನಿಗೆ ಟ್ಯಾಕ್ಸ್ ಹಾಕಿದ್ದಾರೆ. ಅದನ್ನು ಕಿತ್ತು ಹೆಂಡತಿಗೆ ಕೊಡುತ್ತಿದ್ದಾರೆ. ಇದೇ ಇವರ ಗ್ಯಾರಂಟಿ ಬಜೆಟ್ ಆಗಿರಲಿದೆ ಎಂದು ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.