ಬೆಂಗಳೂರು: ಕೇಂದ್ರ ಬಜೆಟ್’ನಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದ್ದು, ನಮ್ಮ ರಾಜ್ಯಗಳ ಹಣ ನಮಗೇ ಹಂಚಿಕೆಯಾಗಬೇಕಾದರೆ ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯವಾಗಿದೆ ಎಂಬ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ಬಿಜೆಪಿ ನಾಯಕರನ್ನು ಕೆರಳಿಸುವಂತೆ ಮಾಡಿದೆ.
ಡಿ.ಕೆ.ಸುರೇಶ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಅಖಂಡ ಭಾರತವನ್ನು ತುಂಡು ಮಾಡಿದ ಕಾಂಗ್ರೆಸ್ಸಿಗರ ಮನಸ್ಥಿತಿ ಇಂದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ದೇಶವನ್ನು ಮತ್ತೊಮ್ಮೆ ವಿಭಜಿಸುವ ಬಹುದೊಡ್ಡ ಷಡ್ಯಂತ್ರ ಸಂಸದ ಸುರೇಶ್ ಅವರ ಬಾಯಲ್ಲಿ ಬಂದಿದೆ ಎಂದು ಗೇಲಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ದೇಶವನ್ನೇ ತುಂಡು ಮಾಡುವ ಮತಾಂಧ ಜಿಹಾದಿಗಳನ್ನು ಬಳಸಿಕೊಂಡು ಅವರನ್ನು ಪೋಷಣೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷವು ಇಂದು ಜಿಹಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಧರ್ಮದ ಆಧಾರದ ಮೇಲೆ ಭಾರತವನ್ನು ಒಡೆದಾದ ಮೇಲೂ
ಕಾಂಗ್ರೆಸ್’ಗೆ ದೇಶವನ್ನು ಛಿದ್ರ ಮಾಡುವ ಮಹದಾಸೆ ಈಡೇರದೆ ಇರುವುದೇ ಇಂತಹ ಮತಿಗೇಡಿ ಹೇಳಿಕೆಗಳು ಹೊರ ಬರಲು ಕಾರಣ ಎಂದು ಅಭಿಪ್ರಾಯ ಹಂಚಿಕೊಂಡಿದೆ.
ಭಾರತದಲ್ಲಿ ಬದುಕುವ ಇಚ್ಛೆ ಇಲ್ಲದೆ ಇದ್ದರೆ, ದೇಶದ್ರೋಹಿ ಹೇಳಿಕೆಗಳನ್ನು ನೀಡುವುದು ಬಿಟ್ಟು ವಿಶಾಲ ಪ್ರಪಂಚದಲ್ಲಿ ಭಾರತ ಬಿಟ್ಟು ಬೇರೆ ಯಾವುದೇ ದೇಶಕ್ಕೆ ಕಾಂಗ್ರೆಸ್ನವರು ತೆರಳಬಹುದು, ಅದು ಕಾಂಗ್ರೆಸ್ಸಿಗರೇ ಸೃಷ್ಟಿಸಿದ ಪಾಕಿಸ್ಥಾನದಲ್ಲಿ ಕಾಂಗ್ರೆಸ್ಸಿಗರಿಗೆ ರಾಜ ಮರ್ಯಾದೆ ಸಿಕ್ಕರೂ ಸಿಗಬಹುದು ಎಂದು ಬಿಜೆಪಿ ಕುಟುಕಿದೆ.