ಬೆಂಗಳೂರು: ಅಯೋಧ್ಯೆಯಲ್ಲಿನ ಭವ್ಯ ಶ್ರೀರಾಮ ಮಂದಿರ ಲೋಕಾರ್ಪಣೆ ದಿನದಂದು ಎಲ್ಲೇಲ್ಲೂ ‘ರಾಮೋತ್ಸವ’ ನೆರವೇರಲಿ ಎಂದು ವಿಶ್ವಹಿಂದೂ ಪರಿಷತ್ ಕರೆ ನೀಡಿದೆ. ರಾಮೋತ್ಸವ ಎಂದರೆ ಸಾಧ್ಯವಾದಷ್ಟು ತಮ್ಮ ಕಾರ್ಯಕ್ಷೇತ್ರಗಳಲ್ಲೇ ಸರಳವಾಗಿ ರಾಮನಿಗೆ ಪೂಜೆ ಮಾಡುವುದು, ಅಯೋಧ್ಯೆಯ ನೇರಪ್ರಸಾರದ ವೀಕ್ಷಣೆಯ ವ್ಯವಸ್ಥೆ ಮಾಡುವ ಮೂಲಕ ಬಹು ನಿರೀಕ್ಷಿತ ಈ ಸುವರ್ಣ ಘಳಿಗೆಯ ವೀಕ್ಷಣೆಯ ಅವಕಾಶ ಕಲ್ಪಿಸುವುದು. ದೇವಸ್ಥಾನಗಳಲ್ಲಿ ಸಂಭ್ರಮದ ದೀಪೋತ್ಸವ ಆಚರಿಸುವ ಮೂಲಕ ನಭೋ ಮಂಡಲದಲ್ಲಿ ವಿಶಿಷ್ಟ ಚೈತನ್ಯವನ್ನು ತುಂಬುವುದು.
ಈ ಕುರಿತಂತೆ ಮಾಧ್ಯಮ ಪ್ರಕಟಣೆ ಮೂಲಕ ಜನಮಾನಸಕ್ಕೆ ಮನವಿಯೊಂದನ್ನು ಮಾಡಿರುವ ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರೀ, ಅಯೋಧ್ಯೆಯ ಭವ್ಯ ಶ್ರೀರಾಮದೇಗುಲದಲ್ಲಿನ ಪ್ರಾಣಪ್ರತಿಷ್ಠೆಯ ಕ್ಷಣವನ್ನು ಭಾರತವೇ ಏಕೆ, ಇಡೀ ವಿಶ್ವವೇ ಕಾತರದಿಂದ ಎದುರು ನೋಡುತ್ತಿದೆ. ಈ ಸುವರ್ಣ ಘಳಿಗೆಯ ವೀಕ್ಷಿಸಲು ಅವಕಾಶ ಮಾಡಿಕೊಡುವಂತೆ ಉದ್ಯಮಪತಿಗಳ, ಸಂಘ ಸಂಸ್ಥೆಗಳ, ವ್ಯಾಪಾರ ಮಳಿಗೆಗಳ, ವ್ಯಾಪಾರಿಗಳ, ಶಾಲಾ ಕಾಲೇಜು ಆಡಳಿತ ಮಂಡಳಿಗಳ, ಸರ್ಕಾರಿ ಕಚೇರಿಗಳ ಮುಖ್ಯಸ್ಥರನ್ನು ವಿಶ್ವ ಹಿಂದೂ ಪರಿಷದ್ ಪರವಾಗಿ ಮನವಿ ಮಾಡಿದ್ದಾರೆ.
ಜಗತ್ತಿಗೇ ತಿಳಿದಿರುವಂತೆ, ಸುಮಾರು 500 ವರ್ಷಗಳ ಸಂಘರ್ಷದ ನಂತರ ಭಾರತದ ಪುಣ್ಯಭೂಮಿ ಅಯೋಧ್ಯೆಯಲ್ಲಿ, ಶ್ರೀರಾಮ ಜನ್ಮಸ್ಥಾನದಲ್ಲಿ, ಭವ್ಯ ಮಂದಿರವು ನಿರ್ಮಾಣ ಗೊಳ್ಳುತ್ತಿದ್ದು, 22.01.2024ರಂದು ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಈ ದಿನವನ್ನು ಭಾರತೀಯರೆಲ್ಲರೂ ಒಂದು ರಾಷ್ಟ್ರೀಯ ಉತ್ಸವವನ್ನಾಗಿ, ಹಬ್ಬವನ್ನಾಗಿ ಸಂತೋಷ, ಸಂಭ್ರಮ, ಸಡಗರ, ಉಲ್ಲಾಸಗಳಿಂದ ಆಚರಿಸುವ ಸಿದ್ಧತೆಗಳನ್ನು ಮಾಡಿಕೊಳ್ಳತ್ತಿದ್ದಾರೆ. ಈಗಾಗಲೇ ಎಲ್ಲ ಮನೆಗಳಿಗೂ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ, ರಾಮ ಮಂದಿರದ ಭಾವಚಿತ್ರ ಮತ್ತು ನಿವೇದನಾ ಪತ್ರವನ್ನು ತಲುಪಿಸುವ ಕಾರ್ಯ ಅತ್ಯುತ್ಸಾಹದಿಂದ, ಭಕ್ತಿಯಿಂದ ನಡೆಯುತ್ತಿದ್ದು, ಭಾರತವೇ ಏಕೆ, ಇಡೀ ವಿಶ್ವವೇ ಈ ಮುಹೂರ್ತವನ್ನು ಕಾತರದಿಂದ ಎದುರು ನೋಡುತ್ತಿದೆ. 22.01.2024 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುವಾಗ, ಇಡೀ ಭಾರತದಲ್ಲಿ ಗ್ರಾಮ- ನಗರಗಳಲ್ಲಿರುವ ವಿವಿಧ ದೇವತಾ ಮಂದಿರಗಳಲ್ಲಿ ಹೋಮ, ಯಜ್ಞ, ಪೂಜೆ, ಜಪ, ಭಜನೆ, ಪ್ರವಚನ, ಆರತಿ, ಪ್ರಸಾದ ವಿನಿಯೋಗ ದೊಂದಿಗೆ ಪರದೆಯಲ್ಲಿ ಅಯೋಧ್ಯೆಯ ನೇರ ಪ್ರಸಾರವನ್ನು ಎಲ್ಲರೂ ಒಟ್ಟಿಗೆ ಕುಳಿತು ವೀಕ್ಷಿಸುವ ವ್ಯವಸ್ಥೆಗಳು ಸಿದ್ಧಗೊಳ್ಳುತ್ತಿವೆ ಎಂದು ಜಗನ್ನಾಥ ಶಾಸ್ತ್ರೀ ತಿಳಿಸಿದ್ದಾರೆ.
ಸುವರ್ಣ ಘಳಿಗೆಯ ವೀಕ್ಷಣೆಯ ಅವಕಾಶ ಇರಲಿ..ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುವಾಗ ನಮ್ಮ ರಾಜ್ಯದ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸುವಂತೆ ಸರ್ಕಾರವೇ ಸೂಚಿಸಿದೆ. ಉತ್ತರ ಪ್ರದೇಶದಲ್ಲಿ ರಜೆಯನ್ನೇ ಘೋಷಿಸಲಾಗಿದೆ. ಈ ಶುಭ ದಿನವು ಕೆಲಸದ ದಿನವಾಗಿರುವುದರಿಂದ, ಮಂದಿರಗಳಿಗೆ ತೆರಳಿ ವೀಕ್ಷಿಸಲು ಅನಾನುಕೂಲವಾಗಿರುವಂತಹ ಭಕ್ತ ಜನತೆಗೆ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲೇ ಸರಳವಾಗಿ ರಾಮನಿಗೆ ಪೂಜೆ ಮಾಡಿ, ಅಯೋಧ್ಯೆಯ ನೇರಪ್ರಸಾರದ ವೀಕ್ಷಣೆಯ ವ್ಯವಸ್ಥೆಯನ್ನು ಮಾಡುವ ಮೂಲಕ ಬಹು ನಿರೀಕ್ಷಿತ ಈ ಸುವರ್ಣ ಘಳಿಗೆಯ ವೀಕ್ಷಣೆಯ ಅವಕಾಶವನ್ನು ಮಾಡಿಕೊಡುವಂತೆ ಉದ್ಯಮಪತಿಗಳ, ಸಂಘ ಸಂಸ್ಥೆಗಳ, ವ್ಯಾಪಾರ ಮಳಿಗೆಗಳ (ಮಾಲ್ ಗಳ), ವ್ಯಾಪಾರಿಗಳ, ಶಾಲಾ ಕಾಲೇಜು ಆಡಳಿತ ಮಂಡಳಿಗಳ, ಸರ್ಕಾರಿ ಕಚೇರಿಗಳ ಮುಖ್ಯಸ್ಥರನ್ನು ವಿಶ್ವ ಹಿಂದೂ ಪರಿಷದ್ ವಿನಮ್ರ ಪೂರ್ವಕವಾಗಿ ಕೇಳಿಕೊಳ್ಳುತ್ತಿದೆ. ಈ ಐತಿಹಾಸಿಕ ಕ್ಷಣಗಳು ಇತಿಹಾಸದ ಗರ್ಭವನ್ನು ಸೇರುವಾಗ, ನಮ್ಮೆಲ್ಲರ ಈ ಸಾಮೂಹಿಕ ಪಾಲ್ಗೊಳ್ಳುವಿಕೆಯು ನವ ಇತಿಹಾಸವನ್ನು ಸೃಷ್ಟಿಸಲಿದೆ ಎಂದು ಅವರು ಸಲಹೆ ಮಾಡಿದ್ದಾರೆ.
ನಭೋ ಮಂಡಲದಲ್ಲಿ ವಿಶಿಷ್ಟ ಚೈತನ್ಯ ತುಂಬಿ..ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ದಿನದಂದು ಸಂಜೆ ಸೂರ್ಯಾಸ್ತದ ನಂತರ ಎಲ್ಲರ ಮನೆಗಳ ಮುಂದೆ ಮತ್ತು ದೇವಸ್ಥಾನಗಳಲ್ಲಿ ಸಂಭ್ರಮದ ದೀಪೋತ್ಸವವನ್ನು ಆಚರಿಸುವ ಮೂಲಕ, ನಭೋ ಮಂಡಲದಲ್ಲಿ ವಿಶಿಷ್ಟ ಚೈತನ್ಯವನ್ನು ತುಂಬಿ, ಶ್ರೀರಾಮನ ಜನ್ಮಭೂಮಿ ಮಂದಿರ ನಿರ್ಮಾಣಕ್ಕಾಗಿ ಹೋರಾಡಿ ಹುತಾತ್ಮರಾದ ಎಲ್ಲಾ ಬಲಿದಾನಿಗಳ ಆತ್ಮಗಳಿಗೆ ತೃಪ್ತಿಯಾಗುವಷ್ಟು ದೀಪಗಳನ್ನು ಬೆಳಗಿ, ಅಯೋಧ್ಯೆಯ ಕಡೆ ಮುಖ ಮಾಡಿ ಶ್ರೀರಾಮನಿಗೆ ಆರತಿಯನ್ನು ಬೆಳಗಿ, ಮತ್ತೊಂದು ನವ ಇತಿಹಾಸ ನಿರ್ಮಿಸೋಣ ಎಂದು ವಿಶ್ವ ಹಿಂದೂ ಪರಿಷದ್ ಪರವಾಗಿ ಕರೆ ನೀಡಿರುವ ಜಗನ್ನಾಥ ಶಾಸ್ತ್ರೀ, ಈ ದೀಪೋತ್ಸವದ ಸಂದರ್ಭದಲ್ಲಿ ಉಪಗ್ರಹದಿಂದ ಭಾರತವನ್ನು ವೀಕ್ಷಿಸಿದರೆ, ಭಾರತವೇ ಜ್ಯೋತಿರ್ಮಯವಾಗಿ ಗೋಚರವಾಗುವಂತೆ, ಎಲ್ಲಾ ದೇವಾಧಿದೇವತೆಗಳು ಮೇಲಿನ ಲೋಕಗಳಿಂದ ನಮ್ಮ ಭಾರತವನ್ನು ಸಂಭ್ರಮದಿಂದ ವಿಕ್ಷಿಸುವಂತಹ ದೀಪಾರಾಧನೆ ಮಾಡಿ, ಕಣ್ಣುಗಳಲ್ಲಿ ತುಂಬಿಸಿಕೊಂಡು ಧನ್ಯತೆಯನ್ನುಪಡೆಯೋಣ ಎಂದಿದ್ದಾರೆ.