ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಲ್ಲಿನ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚುರುಕಾಗಿದೆ. ನೇಮಕಾತಿ ಅಂಗವಾಗಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಯುತ್ತಿದ್ದು ಅನೇಕರು ಗೈರುಹಾಜರಾಗಿದ್ದಾರೆ. ಅಂತಹಾ ಅಭ್ಯರ್ಥಿಗಳಿಗೆ ಅಂತಿಮ ಅವಕಾಶವನ್ನು ವಿಸ್ತರಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.
ಕರಾರಸಾ ನಿಗಮದಲ್ಲಿ ಜಾಹೀರಾತು ಸಂ.1/2018 ದಿನಾಂಕ:17-03-2018 ರನ್ವಯ ತಾಂತ್ರಿಕ ಸಹಾಯಕ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಗೆ ಮೂಲ ದಾಖಲಾತಿ ಹಾಗೂ ದೇಹದಾರ್ಢ್ಯತೆ ಪರಿಶೀಲಿಸಲು 26-12-2023ರಿಂದ 28-12-2023ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಕೆಲವು ಅಭ್ಯರ್ಥಿಗಳು ಗೈರುಹಾಜರಾಗಿರುವ ಹಿನ್ನಲೆಯಲ್ಲಿ ಅಂತಿಮ ಅವಕಾಶವಾಗಿ ಗೈರುಹಾಜರಾದ ಅಭ್ಯರ್ಥಿಗಳಿಗೆ 03-01-2024ರಂದು ಕಚೇರಿ ವೇಳೆಯಲ್ಲಿ ಕರಾರಸಾ ನಿಗಮದ ಕೇಂದ್ರ ಕಚೇರಿಯ ಸಭಾಂಗಣ, ಶಾಂತಿನಗರ, ಬೆಂಗಳೂರು ಇಲ್ಲಿ ದಾಖಲಾತಿ / ದೇಹದಾರ್ಢ್ಯತೆ ಪರಿಶೀಲಿಸಲು ನಿರ್ಧರಿಸಲಾಗಿದೆ. ಈ ಕುರಿತು ಗೈರುಹಾಜರಾದ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ SMS ಮೂಲಕ ತಿಳಿಸಲಾಗಿದೆ. ಗೈರುಹಾಜರಾದ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್-ಸೈಟ್ ಆದ ksrtcjobs.com ರಲ್ಲಿ ಕರೆಪತ್ರ ಡೌನ್-ಲೋಡ್ ಮಾಡಿಕೊಂಡು ಕರೆಪತ್ರದಲ್ಲಿ ನಮೂದಿಸಿರುವ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ನಿಗಧಿತ ದಿನಾಂಕದಂದು ತಪ್ಪದೇ ಹಾಜರಾಗಲು ಸೂಚಿಸಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕರಾರಸಾ ನಿಗಮದ ಸಹಾಯವಾಣಿ ಸಂಖ್ಯೆ.080 22221321-321, 7760990061, 7760990044 & 7760981930 ಗಳಿಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.
ಈ ನಡುವೆ, ಅಭ್ಯರ್ಥಿಗಳಿಗೆ ವೈಯಕ್ತಿಕ ಸಂದರ್ಶನ ಹಾಗೂ ಸಂದರ್ಶನಕ್ಕೆ ಅಂಕಗಳು ಇರುವುದಿಲ್ಲ. ನಿಗಧಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಶೇಕಡವಾರು ಅಂಕ ಹಾಗೂ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್ / ಮೀಸಲಾತಿ ನಿಯಮಗಳ ಆಧಾರದ ಮೇಲೆ ನೇಮಕಾತಿ ಮಾಡುವುದರಿಂದ ಯಾವುದೇ ಶಿಫಾರಸ್ಸು, ಪ್ರಭಾವ ಹಾಗೂ ಅಮಿಷ/ಅವ್ಯವಹಾರಗಳಿಗೆ ಒಳಗಾಗಬಾರದೆಂದು KSRTC ನಿರ್ದೇಶಕರು (ಸಿ & ಜಾ) ಸಲಹೆ ನೀಡಿದ್ದಾರೆ.


























































