ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ಟಿಕೆಟ್‌ನಲ್ಲಿ ಕ್ರಸ್ಮಸ್ ಹಬ್ಬದ ಶುಭಾಶಯದ ಸಾಲುಗಳು ಮುದ್ರಣವಾಗಿರುವ ಬಗ್ಗೆ KSRTC ಸ್ಪಷ್ಟನೆ ನೀಡಿದೆ.
ಈ ಬಾರಿ ಕ್ರಿಸ್ಮಸ್ ಸಂದರ್ಭದಲ್ಲಿ KSRTC ಟಿಕೆಟ್’ ಹಬ್ಬದ ಶುಭಾಷಯ ಬಗ್ಗೆ ಮುದ್ರಣಗೊಂಡ ವಿಚಾರ ಬಗ್ಗೆ ತೀವ್ರ ಚರ್ಚೆ ನಡೆದಿದೆ. ಈ ಶುಭಾಶಯವು ಕ್ರಿಸ್ಮಸ್ ಹಬ್ಬಕ್ಕಷ್ಟೇ ಸೀಮಿತವೇ ಎಂಬ ಪ್ರಶ್ನೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಧ್ವನಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ KSRTC ಅಧಿಕಾರಿಗಳು ವಿಶೇಷ ಸಂದರ್ಭಗಳಲ್ಲಿ ಮಾಹಿತಿಗಳನ್ನು ಟಿಕೇಟಿನಲ್ಲಿ ಮುದ್ರಿಸುವ ವ್ಯವಸ್ಥೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಕರಾರಸಾ ನಿಗಮದಲ್ಲಿ ಒಟ್ಟು 83 ಘಟಕಗಳು ಹಾಗೂ 16 ವಿಭಾಗಗಳಿದ್ದು ದಿನನಿತ್ಯ 10200 ಇಟಿಎಂ ಗಳಲ್ಲಿ ಮುದ್ರಿತ ಮಾಹಿತಿಯನ್ನು ಅಪ್ಲೋಡ್ ಮಾಡಲಾಗುತ್ತದೆ. ವಿದ್ಯುನ್ಮಾನ ಟಿಕೆಟ್ ವಿತರಣಾ ಯಂತ್ರಗಳ ಮುಖೇನ ಹಬ್ಬ ಹರಿದಿನಗಳ, ರಾಷ್ಟ್ರೀಯ ಹಬ್ಬಗಳ ಹಾಗೂ ಇತರೆ ರಜಾ ದಿನಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಘಟಕಗಳಲ್ಲಿ ಆಂತರಿಕ ಬಳಕೆಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಘಟಕಗಳ ಮಟ್ಟದಲ್ಲಿಯೇ ಮಾಹಿತಿಯನ್ನು ಇಟಿಎಂ ನಲ್ಲಿ ನಮೂದಿಸುವ ವ್ಯವಸ್ಥೆ ಇದ್ದು, ಆಯಾ ಸಂದರ್ಭಗಳಲ್ಲಿ ಆಂತರಿಕ ಮಾಹಿತಿಯು ತಪ್ಪಾಗಿ ಇಟಿಎಂ ಟಿಕೆಟ್ ನಲ್ಲಿ ನಿಗಮದ ಚಿಕ್ಕಬಳ್ಳಾಪುರ ವಿಭಾಗದ ಮೂರು ಘಟಕಗಳಾದ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮತ್ತು ಚಿಂತಾಮಣಿ ಘಟಕಗಳಲ್ಲಿ ಮಾತ್ರ ಈ ಮೇಲಿನ ರೀತಿಯ ಮಾಹಿತಿಯು ಮುದ್ರಿತ ವಾಗಿದ್ದು, ಇದನ್ನು ಈಗಾಗಲೇ ಸರಿಪಡಿಸಲಾಗಿರುತ್ತದೆ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಇದೇ ಘಟಕದಲ್ಲಿ ಸಂಕ್ರಾಂತಿ ಹಬ್ಬಕ್ಕೂ ಶುಭಾಶಯ ಕೋರಿರುವ ಬಗ್ಗೆಯೂ ಮಾಹಿತಿಯನ್ನು ಹಂಚಿಕೊಂಡಿದ್ದಾರೆ






















































