ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಪ್ರಯಾಣಿಕರಿಗೆ ಸುರಕ್ಷಾ ಕೊಡುಗೆ ಪ್ರಕಟಿಸಿದೆ. ಸಾರಿಗೆ ಬಸ್’ಗಳಲ್ಲಿ ಪ್ರಯಾಣಿಸುವವರ ಅಪಘಾತ ಪರಿಹಾರ ಮೊತ್ತವನ್ನು 3 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ನಿರ್ದೇಶನದಂತೆ ಸಾರಿಗೆ ನಿಗಮಗಳು ಈ ಬಗ್ಗೆ ಮಹತ್ವದ ಹೆಜ್ಜೆ ಇಟ್ಟಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಅಪಘಾತಕ್ಕೀಡಾದಾಗ, ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ದುರದೃಷ್ಟವಶಾತ್ ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಸದ್ದುದೇಶದಿಂದ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪ್ರಸ್ತುತ ನೀಡಲಾಗುತ್ತಿರುವ ಆರ್ಥಿಕ ಪರಿಹಾರ ಮೊತ್ತವನ್ನು 3,00,000 ರೂಪಾಯಿಯಿಂದ 10,00,000ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆ ಜನವರಿಯಿಂದಲೇ (01-01-2024) ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವರ ಕಚೇರಿ ಮೂಲಗಳು ತಿಳಿಸಿವೆ.
ಮೃತರ ಅವಲಂಬಿತರಿಗೆ ಹೆಚ್ಚುವರಿ ಪರಿಹಾರ ಮೊತ್ತವನ್ನು ನೀಡುವ ಸಲುವಾಗಿ ರೂ.50.00 ರಿಂದ ರೂ.99.00 ರವರೆಗಿನ ಮುಖ ಬೆಲೆಯ ಟಿಕೇಟ್ ಪಡೆದು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ 1 ರೂ. ಮತ್ತು 100 ರೂಪಾಯಿಗಿಂತ ಹೆಚ್ಚಿನ ಬೆಲೆಯ ಟಿಕೇಟ್ ಪಡೆದು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ 2 ರೂ ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಣೆಯನ್ನು ಆಕರಿಸಲಾಗುತ್ತದೆ. ಈ ಹಿಂದೆ ರೂ.100 ಮುಖ ಬೆಲೆಯ ಟಿಕೇಟ್ ಪಡೆದು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ರೂ.1.00 ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಣೆ ಮಾಡಲಾಗುತ್ತಿತ್ತು.
ರೂ.1.00 ರಿಂದ ರೂ.49.00 ರವರೆಗಿನ ಮುಖ ಬೆಲೆಯ ಟಿಕೇಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಂದ ಯಾವುದೇ ಅಪಘಾತ ಪರಿಹಾರ ನಿಧಿ ವಂತಿಕೆ ಪಡೆಯಲಾಗುವುದಿಲ್ಲ ಎಂದು ಸಾರಿಗೆ ಸಂಸ್ಥೆ ಮೂಲಗಳು ತಿಳಿಸಿವೆ.






















































