ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಆತಂಕ ಹೆಚ್ಚಿದ್ದು ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಸರ್ಕಾರ ಸೂಚಿಸಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೋವಿಡ್ ಸಂಪುಟ ಉಪಸಮಿತಿ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ಒದಗಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಕೋವಿಡ್ ಲಕ್ಷಣಗಳು, ಜ್ವರ, ಕೆಮ್ಮು ಮಕ್ಕಳಲ್ಲಿ ಕಂಡುಬಂದರೆ ಶಾಲೆಗೆ ಕಳುಹಿಸದೇ ಇರುವುದು ಉತ್ತಮ ಎಂದರು. ಮಕ್ಕಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ನಿರ್ಬಂಧ ಹಾಕುವುದು ಒಳ್ಳೆಯದು. ಹೊರಗೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು, ಶುಚಿತ್ವ ಕಾಪಾಡಿ, ಸ್ಯಾನಿಟೈಸರ್ ಬಳಸಬೇಕು ಎಂದು ಸಚಿವರು ಸಲಹೆ ಮಾಡಿದರು.






















































