ಬೆಂಗಳೂರು: ನಾಗ್ಪುರದ ಹೆಡಗೇವಾರ್ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆಗೆ ಆರ್ಎಸ್ಎಸ್ ಸ್ಪಷ್ಟನೆ ನೀಡಿದೆ. ತಾನು ದಲಿತ ಎಂಬ ಕಾರಣಕ್ಕೆ ತನಗೆ ಹೆಡಗೇವಾರ್ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಗೂಳಿಹಟ್ಟಿ ಶೇಖರ್ ಅವರ ಆರೋಪ ನಿರಾಧಾರ ಎಂದು ಆರೆಸ್ಸೆಸ್ ಹೇಳಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ-ಕೇಂದ್ರ ಕಾರ್ಯವಾಹ ಎನ್ ತಿಪ್ಪೇಸ್ವಾಮಿ, ಸಂಘವು ಪ್ರತಿಯೊಬ್ಬರನ್ನು ಸ್ವಾಗತಿಸುತ್ತದೆ. ಇಂತಹ ಆರೋಪ ನಿರಾಧಾರವಾಗಿದೆ ಎಂದಿದ್ದಾರೆ.
ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿ ಪ್ರವೇಶದ್ವಾರದಲ್ಲಿ ಸಂದರ್ಶಕರ ಹೆಸರನ್ನು ನೋಂದಾಯಿಸಿಕೊಳ್ಳುವ ಯಾವುದೇ ವ್ಯವಸ್ಥೆಯನ್ನು ಅನುಸರಿಸಿಲ್ಲ ಎಂದಿರುವ ಅವರು, ಆರ್ಎಸ್ಎಸ್ ಕಚೇರಿಗಳಲ್ಲಿ, ಪ್ರತಿ ದಿನ ವಿವಿಧ ಜಾತಿಯ ಜನರು ಮ್ಯೂಸಿಯಂಗೆ ಪ್ರವೇಶಿಸುತ್ತಾರೆ. ಪೂರ್ವಾಗ್ರಹವಿಲ್ಲದೆ ಎಲ್ಲರಿಗೂ ಅವಕಾಶ ನೀಡಲಾಗುತ್ತದೆ ಎಂದು ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಗೆ ಮೂರು ತಿಂಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳುತ್ತಿರುವ ಗೂಳಿಹಟ್ಟಿ ಶೇಖರ್, ಆ ಬಳಿಕ ಹಲವು ಆರ್ಎಸ್ಎಸ್ ಮುಖಂಡರನ್ನು ಭೇಟಿ ಮಾಡಿದ್ದರೂ ಯಾರಲ್ಲೂ ಈ ವಿಚಾರ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಎಂದು ತಿಪ್ಪೇಸ್ವಾಮಿ ಹೇಳಿದ್ದಾರೆ.







































































