ಬೆಂಗಳೂರು: ಮಳೆ ಅವಾಂತರದ ನಡುವೆ ರಾಜ್ಯದಲ್ಲೀಗ ಡೆಂಗ್ಯೂ ಗುಮ್ಮ ಆವರಿಸಿದೆ. ನಿರಂತರ ಮಳೆಯಾಗಿತ್ತಿದ್ದು ಜನರು ಶೀತ, ಜ್ವರ ಸಹಿತ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಡೆಂಗ್ಯೂ ಜ್ವರವು ಶರವೇಗದಲ್ಲಿ ಹರಡುತ್ತಿದ್ದು ಜನರು ಆತಂಕಕ್ಕೊಳಗಾಗಿದ್ದಾರೆ.
ರಾಜ್ಯಾದ್ಯಂತ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದ್ದು, ಈ ತಿಂಗಳಲ್ಲಿ ಸುಮಾರು 1,813 ಪ್ರಕರಣಗಳು ಡೃಢಪಟ್ಟಿವೆ.
ಜ್ವರ, ಮೈ-ಕೈ ನೋವು, ತಲೆ ನೋವು ಸಹಿತ ವಿವಿಧ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳನ್ನು ಪರೀಕ್ಷೆಗೆ ಗುರಿಪಡಿಸಿದಾಗ ಬಹುತೇಕ ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲೇ ಜುಲೈ 1ರಿಂದ 24ರ ನಡುವೆ ಸುಮಾರು 1,294 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಈ ನಡುವೆ, ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನಿಸರಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.