ಮಂಗಳೂರು: ಬಂದರು ನಗರಿ ಮಂಗಳೂರಿನಲ್ಲಿ ವಿದ್ಯಾರ್ಥಿಗಳ ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮಂಗಳೂರಿನ ಪಣಂಬೂರು ಕಡಲ ಕಿನಾರೆ ಬಳಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಾಲಕ ಹಾಗೂ ಬಾಲಕಿಯೊಬ್ಬರ ಮೇಲೆ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ನೋಡಿದ್ದೀರಾ ಎಂದು ಪ್ರಶ್ನಿಸಿ ಯುವಕರ ಗುಂಪು ಹಲ್ಲೆ ನಡೆಸಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಮಂಗಳೂರು ನಿವಾಸಿಗಳಾದ ದೀಕ್ಷಿತ್ ಅಲಾಪೆ (32) ಮತ್ತು ಲಾಯ್ಡ್ ಪಿಂಟೋ (32) ಎಂಬಿಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸ್ಕೂಟರ್ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?
ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಆರು ವಿದ್ಯಾರ್ಥಿಗಳು ಶುಕ್ರವಾರ ಮಂಗಳೂರಿನ ಪಣಂಬೂರು ಬೀಚ್‌ಗೆ ತೆರಳಿದ್ದರು. ಆ ಸಂದರ್ಭದಲ್ಲಿ ಯುವಕರ ಗುಂಪು ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ಇರುವ ವೀಡಿಯೊಗಳನ್ನು ಸಹ ಚಿತ್ರೀಕರಿಸಿದ್ದಾರೆ. ಬಳಿಕ ‘ದಿ ಕೇರಳ ಸ್ಟೋರಿ’ ಸಿನಿಮಾದಿಂದ ಆಕೆ ಏನನ್ನೂ ಕಲಿತಿಲ್ಲವೇ ಎಂದು ಕೇಳಿ ಹಲ್ಲೆ ನಡೆಸಿದ್ದಾದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸಂತ್ರಸ್ತೆ ಮತ್ತು ನಾಲ್ವರು ವಿದ್ಯಾರ್ಥಿನಿಯರು ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.