ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರ ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿ ಕಾಣಿಕೆ ಎಣಿಕೆ ಕಾರ್ಯ ಸೋಮವಾರ ನೆರವೇರಿತು. ಸುಮಾರು 55,18,188 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ತ್ ನಲ್ಲಿ ಎಣಿಕೆ ಕಾರ್ಯ ನಡೆಯಿತು.
ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಮುಜರಾಯಿ ಇಲಾಖೆ ಜಿಲ್ಲಾ ಸಹಾಯಕ ಆಯುಕ್ತೆ ಜೆ.ಜೆ.ಹೇಮಾವತಿ, ದೇವಾಲಯದ ಅಧೀಕ್ಷಕ ರಘು ಹುಚ್ಚಪ್ಪ, ಪ್ರಧಾನ ಅರ್ಚಕ ನಾಗೇಂದ್ರ ಶರ್ಮ, ದೇವಾಲಯದ ನಂಜಪ್ಪ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ದೇವಾಲಯದ ಸಿಬ್ಬಂದಿ ಭಾಗವಹಿಸಿದ್ದರು.