ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸೇರ್ಪಡೆಯಿ.ದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ150 ಸ್ಥಾನದಲ್ಲಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಅನೇಕ ವರ್ಷಗಳಿಂದ ಒಂದು ಪಕ್ಷ ಕಟ್ಟಿ ಬೆಳೆಸಿ ಅದಕ್ಕೆ ಶಕ್ತಿಯಾಗಿ ಕೆಲಸ ಮಾಡಿರುವ ಶೆಟ್ಟರ್ ಅವರು, ಅದೇ ರೀತಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಕೆಲಸ ಮಾಡುವ ವಿಶ್ವಾಸವಿದೆ. ಅವರ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಹೆಚ್ಚಿನ ಶಕ್ತಿ ಸಿಗುವ ವಿಶ್ವಾಸವಿದೆ.
ಶೆಟ್ಟರ್ ಅವರಿಗೆ ಜನಸಂಘದ ಹಿನ್ನೆಲೆ ಇದ್ದರೂ ಅವರೂ ಎಂದಿಗೂ ವಿವಾದವಿಲ್ಲದೇ ಕೆಲಸ ಮಾಡಿದಿದ್ದಾರೆ. ನಾವು ಸರ್ಕಾರದಲ್ಲಿದ್ದಾಗ ಅವರು ವಿರೋಧ ಪಕ್ಷದಲ್ಲಿದ್ದರು. ರಾಜಕೀಯವಾಗಿ ಜಟಾಪಟಿ ಇದ್ದರೂ ವೈಯಕ್ತಿಕವಾಗಿ ಎಂದಿಗೂ ಜಗಳವಾಡಿಲ್ಲ. ಅವರು ಬಹಳ ಸೌಮ್ಯವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಖರ್ಗೆ ಗುಣಗಾನ ಮಾಡಿದರು.
ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮನವಿ ಮಾಡಿದ್ದರು. ಇಂದು ಶೆಟ್ಟರ್ ಅವರ ಪಕ್ಷ ಸೇರ್ಪಡೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ 150 ಕ್ಷೇತ್ರ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಅವರು ತಮ್ಮ ಕ್ಷೇತ್ರ ಮಾತ್ರವಲ್ಲ. ರಾಜ್ಯದ ಇತರೆ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮರ್ಥ್ಯ ಅವರಿಗಿದೆ ಎಂದು ಖರ್ಗೆ ಹೇಳಿದರು.