ಬೆಂಗಳೂರು: ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿ ಪಂಚರತ್ನ ಸಮಾರೋಪ ಸಮಾವೇಶ ಮುಗಿಸಿದ ನಂತರವೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಮಹತ್ವಾಕಾಂಕ್ಷಿಯ ಪಂಚರತ್ನ ರಥಯಾತ್ರೆಯನ್ನು ಮುಂದುವರಿಸಿದ್ದಾರೆ.
ಮಂಗಳವಾರ ಅವರು ಬೆಂಗಳೂರು ನಗರದ ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಕೈಗೊಳ್ಳಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಕ್ಷೇತ್ರದ ದೊಡ್ಡ ಬಿದರಕಲ್ಲು ನಿಂದ ರಥಯಾತ್ರೆ ಆರಂಭ ಮಾಡಲಿದ್ದಾರೆ ಎಂದು ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಜವರಾಯಿ ಗೌಡರು ತಿಳಿಸಿದ್ದಾರೆ.
ಭಾರೀ ಪ್ರಮಾಣದಲ್ಲಿ ನಡೆಯಲಿರುವ ರಥಯಾತ್ರೆಯಲ್ಲಿ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು, ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಲಿದ್ದಾರೆ. ಯಾತ್ರೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ನವಂಬರ್ 18ರಂದು ಕೋಲಾರದ ಮುಳಬಾಗಿಲು ಕ್ಷೇತ್ರದ ಕುರುಡುಮಲೆಯಲ್ಲಿ ಆರಂಭವಾಗಿದ್ದ ರಥಯಾತ್ರೆಯು 99 ದಿನಗಳನ್ನು ಪೂರೈಸಿ ನಾಳೆ 100ನೇ ದಿನಕ್ಕೆ ಕಾಲಿರಿಸಲಿದೆ. 88 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸುವ ಮಾಜಿ ಮುಖ್ಯಮಂತ್ರಿಗಳು, 10000 ಕೀ.ಮೀ.ಗೂ ಹೆಚ್ಚು ದೂರ ಕ್ರಮಿಸಿ, 5500ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿದ್ದರು.