ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿ ಫೈಟ್ ಕುತೂಹಲಕಾರಿ ಸನ್ನಿವೇಶ ಸೃಷ್ಟಿಸಿದೆ. ರಾಜ್ಯದ ಪ್ರಭಾವಿ ಸಮುದಾಯವಾಗಿರುವ ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ಕಲ್ಪಿಸಬೇಕೆಂಬ ಹೋರಾಟ ತೀವ್ರಗೊಂಡಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಸತ್ಯಾಗ್ರಹವು ರಾಜ್ಯ ಬಿಜೆಪಿ ಪಾಲಿಗೆ ಭಾರೀ ದೊಡ್ದ ಸವಾಲು ಎಂಬಂತಿದೆ.
ಪಂಚಮಸಾಲಿ ಜಗದ್ಗುರು ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಸತ್ಯಾಗ್ರಹ ಇದೀಗ 46 ದಿನಗಳನ್ನು ಕ್ರಮಿಸಿದೆ.
ವಿವಿದ ಜಿಲ್ಲೆಗಳ ಪಂಚಮಸಾಲಿ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯುತ್ತಿದೆ. ಈವರೆಗೆ ನಡೆದ ಹಲವು ತಂಡಗಳ ಎಚ್ಚರಿಕೆಯ ಘೋಷಣೆಗಳು ಬಿಜೆಪಿ ಸರ್ಕಾರದ ವಿರುದ್ದವೇ ಮಾರ್ಧನಿಸಿದಂತಿದೆ. ಮೀಸಲಾತಿ ಘೋಷಣೆ ಮಾಡದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಉತ್ತರ ಕೊಡುತ್ತೇವೆ ಎಂಬ ಪಂಚಮಸಾಲಿಗಳ ಎಚ್ಚರಿಕೆಯ ಸಂದೇಶವು ಬಿಜೆಪಿ ಸರ್ಕಾರಕ್ಕೆ ಮುಂದಿನ ಸವಾಲುಗಳು ಕಬ್ಬಿಣದ ಕಡಲೆ ಎಂಬ ಸುಳಿವನ್ನು ನೀಡಿದಂತಿದೆ.
ಇನ್ನೊಂದೆಡೆ ಪಂಚಮಸಾಲಿ ಲಿಂಗಾಯತ ಹೋರಾಟಗಾರರು ಈ ಬಾರಿ ಶಿವರಾತ್ರಿ ಉತ್ಸವವನ್ನು ‘ಇಷ್ಟಲಿಂಗ’ ಕೈಂಕರ್ಯ ಮೂಲಕ ಹೋರಾಟ ಸ್ಥಳದಲ್ಲೇ ಆಚರಿಸಿರುವ ವೈಖರಿಯು ಬಿಜೆಪಿ ಸರ್ಕಾರದ ವಿರುದ್ದದ ನಿಲುವಾಗಿದೆ ಎಂಬುದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳ ಪ್ರತಿಪಾದನೆ.
ಇದೆಲ್ಲದರ ನಡುವೆ, ಮಂಗಳವಾರ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನ ಹೋರಾಟಗಾರರು ನಡೆಸಿದ ಸತ್ಯಾಗ್ರಹ ಗಮನಸೆಳೆಯಿತು. ಹೋರಾಟಗಾರರು ಬಾರುಕೋಲು ಚಳುವಳಿ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು.
ಮಂಗಳವಾರ (ಫೆಬ್ರವರಿ 28) ಮಧ್ಯಾಹ್ನ ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಲಿಂಗಾಯತ ಪಂಚಮಸಾಲಿ ಹೋರಾಟ 46 ದಿನಗಳಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ಪಂಚಮಸಾಲಿ ಚಳುವಳಿಗಾರರು ವಿನೂತನ ರೀತಿ ಹೋರಾಟ ಕೈಗೊಂಡರು. ಮುಖ್ಯಮಂತ್ರಿ ಬೊಮ್ಮಾಯಿಯವರು ತಾಯಿ ಮೇಲೆ ಆಣಿ ಮಾಡಿ ಇದೀಗ ಮೋಸ ಮಾಡಿದ್ದಾರೆ ಎಂದು ಆರ್ಭಟಿಸಿದ ಪಂಚಮಸಾಲಿ ಮುಖಂಡರು ಬಾರುಕೋಲು ಚಳುವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರದ ಸಮಾಜದ ಭಾಂದವರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದ್ದರು.