ಬೆಂಗಳೂರು: ರಾಜ್ಯದ ಜನರ ಹೆಮ್ಮೆಯ ರಥ ಕೆಎಸ್ಸಾರ್ಟಿಸಿ ಹೊಸದಾಗಿ ಪರಿಚಯಿಸಿರುವ ‘ಅಂಬಾರಿ ಉತ್ಸವ’ ಬಸ್ಸುಗಳು ನಾಡಿನ ಗಮನಸೆಳೆದಿವೆ. ಫೆಬ್ರವರಿ 21ರಂದು ವಿಧಾನಸೌಧ ಬಳಿ ಈ ವಿನೂತನ, ಸುಸಜ್ಜಿತ ಬಸ್ಸುಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದರು. ಈ ಅತ್ಯಾಧುನಿಕ ಬಸ್ಸುಗಳು ಶನಿವಾರ ಸಂಚಾರ ಆರಂಭಿಸಿದ್ದು ರಾಜರಸ್ತೆಯಲ್ಲಿ ಸಾಲು ಸಾಲಾಗಿ ಸಾಗಿದ ಈ ಬಸ್ಸುಗಳು ಎಲ್ಲರ ಕುತೂಹಲದ ಕೇಂದ್ರಬಿಂದುವಾದವು.
ಬೆಂಗಳೂರು-ಮೈಸೂರು ನಡುವೆ ಅಧಿಕ ಸಂಖ್ಯೆಯಲ್ಲಿ ‘ಅಂಬಾರಿ ಉತ್ಸವ’ ಬಸ್ಸುಗಳು ಸಂಚಾರ ಕೈಗೊಂಡಿವೆ. ಸಂಚಾರ ಆರಂಭದ ಮೊದಲ ದಿನದಂದು ಬೆಂಗಳೂರು-ಮೈಸೂರು ರಾಜರಸ್ತೆಯಲ್ಲಿ ಈ ‘ಅಂಬಾರಿ’ ಸವಾರಿಯ ದೃಶ್ಯ ವೈಭವವು ಅನನ್ಯ ಸೊಬಗಿಗೆ ಸಾಕ್ಷಿಯಾಯಿತು. ಅದರಲ್ಲೂ ರೈಲ್ವೇ ಕ್ರಾಸಿಂಗ್ ಸನ್ನಿವಶ ವಿಶಿಷ್ಟ ಅನುಭವ ನೀಡಿದೆ.
ಮೈಸೂರು ರಸ್ತೆಯಲ್ಲಿನ ರೈಲ್ವೇ ಮೇಲ್ಸೇತುವೆ ರೀತಿಯ ಹೆದ್ದಾರಿಯಲ್ಲಿ ಅಂಬಾರಿ ಬಸ್ಸುಗಳು ಸವಾರಿ ಕೈಗೊಂಡಾಗ ಅದೇ ಹೊತ್ತಿಗೆ ರೈಲು ಹಳಿಯಲ್ಲಿ ‘ವಂದೇ ಭಾರತ್’ ರೈಲು ಸಂಚರಿಸಿದೆ. ಈ ದೃಶ್ಯವು ಅಚ್ಚರಿಯ ದೃಶ್ಯ ಸೊಬಗನ್ನು ಸಾಕ್ಷೀಕರಿಸುವಂತೆ ಮಾಡಿದೆ. ಈ ವೀಡಿಯೋವನ್ನು ಸಿಎಂ ಬೊಮ್ಮಾಯಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
The State owned KSRTC bus service in Karnataka opens up a whole new chapter in ease of travelling with the flagging off its first of its kind ultra luxury Ambari Utsav fleet of buses.
1/2 pic.twitter.com/EgbON8Onue— CM of Karnataka (@CMofKarnataka) February 25, 2023
‘ವಂದೇ ಭಾರತ್’ ರೈಲು ನಮ್ಮ ದೇಶದ ಪಾಲಿಗೆ ಮಹತ್ವಾಕಾಂಕ್ಷೆಯ ಸೌಲಭ್ಯ. ಇತ್ತ ಕರುನಾಡಿನಲ್ಲಿ ‘ಅಂಬಾರಿ ಉತ್ಸವ’ ಬಸ್ ಪ್ರಯಾಣದಲ್ಲೊಂದು ವಿಭಿನ್ನ ಪ್ರಯೋಗ. ಇವುಗಳ ಸಂಚಾರದ ವೇಳೆ ಅಪರೂಪದಲ್ಲಿ ಅಪರೂಪ ಎಂಬಂತೆ ವೈಶಿಷ್ಟ್ಯಗಳ ‘ಜುಗಲ್‌ಬಂದಿ’ ಸನ್ನಿವೇಶ ಸೃಷ್ಟಿಯಾದಾಗ ಪ್ರಯಾಣಿಕರ ಪಾಲಿಗೂ ರೋಮಾಂಚನ ಅನುಭವವಾಗಿದೆ.
ಕೆಲ ಸಮಯದ ಹಿಂದಷ್ಟೇ ಈ ರೈಲ್ವೇ ಮೇಲ್ಸೇತುವೆ ಮೇಲಿನ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂದರ್ಭದಲ್ಲಿ ಹಳಿಯಲ್ಲಿ ‘ವಂದೇ ಭಾರತ್’ ರೈಲು ಹಾದು ಹೋದ ದೃಶ್ಯವೊಂದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಆ ವೀಡಿಯೋ ಬಗ್ಗೆ ಪ್ರಧಾನಿ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ ಬೆಳವಣಿಗೆ ಸುದ್ದಿಯ ಕೇಂದ್ರಬಿಂದುವಾಗಿತ್ತು. ಇದೀಗ ಇದೇ ರೈಲ್ವೇ ಕ್ರಾಸಿಂಗ್ ಸ್ಥಳದಲ್ಲಿ ರಾಜ್ಯದ ಎರಡು ಅದ್ಭುತಗಳೆನಿಸಿದ ‘ವಂದೇ ಭಾರತ್’ ರೈಲು ಹಾಗೂ ‘ಅಂಬಾರಿ ಉತ್ಸವ್’ ಬಸ್ಸುಗಳ ಸಂಚಾರದ ಅನನ್ಯ ಜುಗಲ್ ಬಂದಿ ದೃಶ್ಯವು ಅನನ್ಯ ಹಾಗೂ ಅಪರೂಪದ ಸೊಬಗಿಗೆ ಸಾಕ್ಷಿಯಾಯಿತು. ಈ ಸೊಗಸಾದ ವೀಡಿಯೋಗೆ ನೆಟ್ಟಿಗರಿಂದ ಸಕತ್ ಲೈಕ್ಸ್ ಕೊಟ್ಟಿದ್ದಾರೆ.