ಬೆಂಗಳೂರು: ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಪರಿಪೂರ್ಣತೆಗೆ ಹೆಸರಾಗಿರುವ KSRTC (ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಇದೀಗ ಹೊಸತನಕ್ಕೆ ಮುನ್ನುಡಿ ಬರೆದಿದೆ. ಪ್ರಯಾಣಿಕರಿಗೆ ಇನ್ನು ಮುಂದೆ ನಿತ್ಯವೂ ‘ಅಂಬಾರಿ ಉತ್ಸವ’.
‘ಅಂಬಾರಿ ಉತ್ಸವ – ಸಂಭ್ರಮದ ಪ್ರಯಾಣ’ ಎಂಬ ಘೋಷಣೆಯು ಕೆಎಸ್ಸಾರ್ಟಿಸಿ ಅಂಗಳದಿಂದ ಪ್ರತಿಧ್ವನಿಸಿದೆ. ಮಹತ್ವಾಕಾಂಕ್ಷೆಯ ವೋಲ್ವೋ ಅಂಬಾರಿ ಬಸ್ ಸೇವೆ ಆರಂಭವಾಗಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ಚಾಲನೆ ನೀಡಿದ್ದಾರೆ.
KSRTC ನಿಗಮವು ಸೇರ್ಪಡೆಗೊಳಿಸುವ 50 ವೋಲ್ವೋ ಸ್ಲೀಪರ್ ವಾಹನಗಳ ಪೈಕಿ ಮೊದಲ ಹಂತವಾಗಿ ಇಂದು 15 ‘ಅಂಬಾರಿ ಉತ್ಸವ’ ಸ್ಲೀಪರ್ ವಾಹನಗಳನ್ನು ಕಾರ್ಯಾಚರಣೆಗೆ ಬಿಡುಗಡೆ ಮಾಡಲಾಗಿದೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ವೋಲ್ವೋ ಬಿಸ್-VI 9600s ಮಾದರಿಯ ಮಲ್ಟಿ ಆಕ್ಸಲ್ ‘ಅಂಬಾರಿ ಉತ್ಸವ’ ಸ್ಲೀಪರ್ ವಾಹನಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಚಂದ್ರಪ್ಪ, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 8000 ಅನುಸೂಚಿಗಳಿಂದ 28 ಲಕ್ಷ ಕಿ.ಮೀ. ಕ್ರಮಿಸುವ ಮೂಲಕ 28 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದು, ಇದರಲ್ಲಿ ಶೇ.17ರಷ್ಟು ವಿದ್ಯಾರ್ಥಿಗಳಿಗೆ ಸೇವೆ ಕಲ್ಪಿಸಲಾಗುತ್ತಿದೆ. ನಿಗಮವು ಪ್ರತಿ ದಿನ ರೂ.10 ಕೋಟಿ ಆದಾಯ ಗಳಿಸುತ್ತಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವೋಲ್ವೋ ಬಿಎಸ್-VI 9600s ಮಾದರಿಯ ಮಲ್ಟಿ ಆಕ್ಸಲ್ ಸ್ಲೀಪರ್ ವಾಹನಗಳಿಗೆ ಸ್ಪರ್ಧೆಯ ಮೂಲಕ ಸಾರ್ವಜನಿಕರಿಂದ ಸ್ವೀಕರಿಸಿದ ಹೆಸರುಗಳ ಮೂಲಕ ‘ಅಂಬಾರಿ ಉತ್ಸವ’ ಎಂಬ ಬ್ರ್ಯಾಂಡ್ ಹೆಸರು ಮತ್ತು ‘ಸಂಭ್ರಮದ ಪ್ರಯಾಣ’ ಎಂಬ ಟ್ಯಾಗ್ ಲೈನ್ ನೀಡಿದೆ .
ಪ್ರಸಕ್ತ ಆರಂಭಿಕ ಹಂತದಲ್ಲಿ “ಅಂಬಾರಿ ಉತ್ಸವ” ಬಸ್‌ಗಳನ್ನು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ.
ಬೆಂಗಳೂರು – ಸಿಕಂದ್ರಬಾದ್
ಬೆಂಗಳೂರು – ಹೈದ್ರಾಬಾದ್
ಬೆಂಗಳೂರು – ಎರ್ನಾಕುಲಂ
ಬೆಂಗಳೂರು – ತಿರುವನಂತಪುರಂ
ಬೆಂಗಳೂರು – ತ್ರಿಚೂರು
ಬೆಂಗಳೂರು – ಪಣಜಿ
ಕುಂದಾಪುರ – ಬೆಂಗಳೂರು
ಮಂಗಳೂರು – ಪೂನಾ
‘ಅಂಬಾರಿ ಉತ್ಸವ್’ನಲ್ಲಿ ಹಲವಾರು ವೈಶಿಷ್ಟ್ಯಗಳು
ಈ ವಾಹನವು 15 ಮೀಟರ್ ಉದ್ದವಿದ್ದು ಹಲವು ವಿಶಿಷ್ಟತೆಗಳನ್ನು ಹೊಂದಿದೆ.
40 ಆಸನಗಳು 2×1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಮಲಗುವ ಮತ್ತು ಕುಳಿತುಕೊಳ್ಳುವ ಸ್ಥಾನದಲ್ಲಿ ಬೆಸ್ಟ್-ಇನ್-ಕ್ಲಾಸ್ ಹೆಡ್ ರೂಮ್ ಜೊತೆಗೆ ಉನ್ನತ ಪ್ರಯಾಣದ ಅನುಭವವನ್ನು ನೀಡುತ್ತದೆ.
KSRTC ವೋಲ್ವೋ-9600s ವಾಹನವು ಸುರಕ್ಷಿತ, ಪರಿಸರ ಕಾಳಜಿ ಹಾಗೂ ಗುಣಮಟ್ಟವನ್ನು ಒಳಗೊಂಡ ಬಲಿಷ್ಠ ಸ್ಕ್ಯಾಂಡಿನೇವಿಯನ್ ಸಂಪ್ರದಾಯದ ವಿನ್ಯಾಸದಲ್ಲಿ ರೂಪಗೊಂಡಿರುವ ವಾಹನವಾಗಿದೆ.
KSRTC ವೋಲ್ವೋ-9600s ಮಾದರಿಯ ವಾಹನದ ಮುಂಭಾಗವು ಏರೋಡೈನಾಮಿಕ್ ಮೇರುಕೃತಿಯ ಭಾಗವಾಗಿದೆ, ವೇಗದ ಕಾರ್ಯಾಚರಣೆಗಳಲ್ಲಿ ಗಾಳಿಯ ಎಳೆತವನ್ನು ಕಡಿಮೆ ಮಾಡಲು ಪೂರಕವಾಗಿ, ಇಂಧನದ ಉಳಿತಾಯಕ್ಕೆ ಕಾರಣವಾಗುತ್ತದೆ.
ಹೊಸದಾಗಿ ವಿನ್ಯಾಸಗೊಳಿಸಿದ ಪ್ಯಾನೊರಮಿಕ್ ವಿಂಡೋಗಳನ್ನು ಹೊಂದಿರುವ KSRTC ವೋಲ್ವೋ-9600s ವಾಹನವು ಪ್ರಯಾಣಿಕರಿಗೆ ವಿಹಂಗಮ ನೋಟದ ವೈಭವವನ್ನು ನೀಡುತ್ತದೆ.
ವಾಹನವು ಉತ್ತಮ ಕಾರ್ಯಕ್ಷಮತೆ ಜೊತೆಗೆ ಐಷಾರಾಮಿ ಗುಣಗಳನ್ನು ಹೊಂದಿದ್ದು, ವಾಹನದ ಹೊರಭಾಗದ ಭವ್ಯತೆಗೆ V-ಆಕಾರದ ಹೆಡ್-ಲೈಟ್ಗಳು ವಿಶಿಷ್ಟವಾದ ಸೊಬಗನ್ನು ನೀಡುತ್ತದೆ.
ಹೊಸ ಸುಧಾರಿತ PX ಸಸ್ಪೆನ್ಶನ್ ಸ್ಟೀರಿಂಗ್ ಸ್ಥಿರತೆ ಮತ್ತು ನಿರ್ವಹಣೆಯನ್ನು ಹೊಂದಿದ್ದು ಇದು ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತದೆ.
ಎಬಿಎಸ್, ಎಂಜಿನ್ ಬ್ರೇಕ್, ಹಿಲ್ ಸ್ಟಾರ್ಟ್ ನೆರವು, ಇಂಟಿಗ್ರೇಟೆಡ್ ಹೈಡ್ರೊಡೈನಾಮಿಕ್ ರಿಟಾರ್ಡರ್ ಮತ್ತು ಎಲೆಕ್ಟ್ರಾನಿಕ್ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ಇವಿಎಸ್ಸಿ) ಸೇರಿದಂತೆ ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ನೊಂದಿಗೆ ವರ್ಧಿತ ಸ್ಥಿರತೆ ಮತ್ತು ನಿಯಂತ್ರಣವನ್ನು ಈ ವಾಹನ ಹೊಂದಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಸಿಬ್ಬಂದಿ ವರ್ಗದವರ ಕಲ್ಯಾಣಕ್ಕಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಿಗಮವು ಆಂತರಿಕವಾಗಿ ತನ್ನ ಪ್ರಾದೇಶಿಕ ಹಾಗೂ ವಿಭಾಗೀಯ ಕಾರ್ಯಗಾರಗಳಲ್ಲಿಯೇ ಹಳೆಯ 250ಕ್ಕೂ ಹೆಚ್ಚು ವಾಹನಗಳನ್ನು ಆಂತರಿಕ ಸಂಪನ್ಮೂಲಗಳಿಂದಲೇ ನವೀಕರಣಗೊಳಿಸಿ ಕಾರ್ಯಚರಣೆಗೊಳಿಸುತ್ತಿದೆ ಎಂದು ತಿಳಿಸಿರುವ ಕೆಎಸ್ಸಾರ್ಟಿಸಿ ಅಧಿಕಾರಿಗಳು, ಗ್ರಾಮಾಂತರ ಪ್ರದೇಶದ ಪ್ರಯಾಣಿಕರು ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಸದುದ್ದೇಶದಿಂದ 600 ಹೊಸ ಕರ್ನಾಟಕ ಸಾರಿಗೆ ಮಾದರಿಯ ವಾಹನಗಳನ್ನು ಮೂರು ತಿಂಗಳ ಅವಧಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ ಎಂದಿದ್ದಾರೆ.
ಅಂತರ ನಗರಗಳ ನಡುವೆ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ಈಗಾಗಲೇ 01 Prototype ವಾಹನವು ಯಶಸ್ವಿ ಕಾರ್ಯಾಚರಣೆಗೊಳಿಸಿದ್ದು, ಮಾರ್ಚಿ-2023 ರೊಳಗಾಗಿ 50 ವಿದ್ಯುತ್ ಚಾಲಿತ ವಾಹನಗಳನ್ನು ಸೇರ್ಪಡೆಗೊಳಿಸಲಾಗುವುದು.
ರಾಜ್ಯದ ಎಲ್ಲಾ ನಗರಗಳ ನಡುವೆ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಲಿಸುವ ಉದ್ದೇಶದಿಂದ ಹಂತ – ಹಂತವಾಗಿ 350 ವಿದ್ಯುತ್ ವಾಹನಗಳನ್ನು ನಿಗಮದಿಂದ ಸೇರ್ಪಡೆಗೊಳಿಸುವ ಯೋಜನೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕಾರ್ಯ ಕ್ರಮದಲ್ಲಿ ನಿಗಮದ ಉಪಾಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ವ್ಯವಸ್ಥಾಪಕ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಹಾಗೂ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.