ತುಮಕೂರು: ಫೆಬ್ರವರಿ ಮಾಹೆಯಲ್ಲಿ ದಾಸೋಹ ದಿನವನ್ನು ವಿಶಿಷ್ಟವಾದ ಕಾರ್ಯಕ್ರಮವಾಗಿ ಇಡೀ ರಾಜ್ಯದಲ್ಲಿ ಆಚರಣೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾ: ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ದಾಸೋಹ ದಿನದ ಪ್ರಯುಕ್ತ ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ದಾಸೋಹ ಮಂಟಪಗಳು ಮಠಮಾನ್ಯಗಳಲ್ಲಿ ಆಗಬೇಕು. ಇದರ ಆಚರಣೆಗೆಂದು ರಜೆ ಘೋಷಿಸುವುದಿಲ್ಲ. ಆದರೆ ಗೌರವ ಸಲ್ಲಿಸುವ ಕೆಲಸ ಮಾಡಲಾಗುವುದು. ಬಸವಣ್ಣ ಹಾಗೂ ಶಿವಕುಮಾರ ಸ್ವಾಮೀಜಿಗಳು ಕಾಯಕತತ್ವವನ್ನು ಪ್ರತಿಪಾದಿಸಿದ್ದು, ಅದರಂತೆ ನಾವು ನಡೆಯುತ್ತೇವೆ ಎಂದರು.
ನಡೆದಾಡುವ ದೇವರು , ಪರಮಪೂಜ್ಯ ಡಾ: ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಗದ್ದುಗೆ ನಮಸ್ಕಾರ ಮಾಡಿದ್ದು, ಸಂತೋಷ, ಸಮಾಧಾನವಾವಿದೆ. ಅವರ ಆಶೀರ್ವಾದ ಈ ನಾಡಿನ ಜನತೆ ಮೇಲೆ ಇದೆ ಎಂಬ ಭಾವನೆಯಿಂದ ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದೇನೆ ಎಂದರು.
ಸ್ವಾಮೀಜಿ ಹುಟ್ಟೂರಿನಲ್ಲಿ ಅವರ ಪ್ರತಿಮೆ ಸ್ಥಾಪನೆ ಕುರಿತು ಪರಿಶೀಲಿಸಿದ್ದು, ಅದಕ್ಕೆ ವೇಗ ನೀಡಲಾಗುತ್ತಿದೆ ಎಂದರು.



















































