ಬಳ್ಳಾರಿ: ರಾಜ್ಯ ಬಿಜೆಪಿ ಸರ್ಕಾರ ಇತಿಹಾಸ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಜನಧ್ವನಿ ಯಾತ್ರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಟ್ಟುತ್ತದೆ. ಮೊದಲು ಬಾರಿಗೆ ಬೊಮ್ಮಾಯಿ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂಬ ಹೆಸರು ಬಂದಿದೆ. ಸಂತೋಷ್ ಪಾಟೀಲ್, ಪ್ರಸಾದ್ ಎಂಬ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಶಿವಕುಮಾರ್ ಎಂಬ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದರು. ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ 90 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆಡಿಯೋ ಅನ್ನು ನಿನ್ನೆ ಮಂಜುನಾಥ್ ಎಂಬ ಗುತ್ತಿಗೆದಾರ ಬಿಡುಗಡೆ ಮಾಡಿದ್ದಾರೆ. ಕಮಿಷನ್ ಆರೋಪಗಳ ಬಗ್ಗೆ ತನಿಖೆ ಮಾಡಿಸಲು ಸಾಕ್ಷಿ ಕೊಡಿ ಎಂದು ಬೊಮ್ಮಾಯಿ ಕೇಳುತ್ತಿದ್ದರು, ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಬೊಮ್ಮಾಯಿ? ಎಂದರು.
ಇಂದಿರಾ ಕ್ಯಾಂಟೀನ್ ಮುಚ್ಚುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ಈಗ ಬಂದ್ ಆಗಿರುವ ಎಲ್ಲಾ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯುವ ಕೆಲಸ ಮಾಡುತ್ತೇವೆ. ಹೊಸಪೇಟೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಅದಕ್ಕೆ ಕೊಳಚೆ ನೀರು ಸೇರಿ 200 ಜನ ಅಸ್ವಸ್ಥರಾಗಿದ್ದಾರೆ, ಒಬ್ಬ ಮಹಿಳೆ ಮೃತಪಟ್ಟಿದ್ದಾಳೆ. ಇದನ್ನು ಸಚಿವ ಆನಂದ್ ಸಿಂಗ್ ಕೂಡ ಒಪ್ಪಿಕೊಂಡಿದ್ದಾರೆ. ನಿಮಗೆ ಮಾನ ಮರ್ಯಾದಿ ಇದ್ದರೆ ಪ್ರಕರಣದ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಆನಂದ್ ಸಿಂಗ್ ಅವರಿಗೆ ಹೇಳುತ್ತೇನೆ ಎಂದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಸಿದ್ದರಾಮಯ್ಯ ಮನವಿ ಮಾಡಿದರು.





















































